ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಿಎಂ ಕಟಿಬದ್ಧ: ಸಚಿವ ಜಮೀರ್‌

| Published : Nov 04 2024, 12:20 AM IST / Updated: Nov 04 2024, 12:21 AM IST

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಿಎಂ ಕಟಿಬದ್ಧ: ಸಚಿವ ಜಮೀರ್‌
Share this Article
  • FB
  • TW
  • Linkdin
  • Email

ಸಾರಾಂಶ

ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಐಎಎಸ್‌, ಐಪಿಎಎಸ್‌, ಕೆಎಎಸ್‌ ಅಧಿಕಾರಿಗಳು, ವೈದ್ಯರು, ಎಂಜಿನಿಯರ್‌ಗಳಾಗಬೇಕು.

ಹೊಸಪೇಟೆ: ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಟಿಬದ್ಧರಾಗಿದ್ದಾರೆ. ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹3200 ಕೋಟಿ ಅನುದಾನ ಒದಗಿಸಿದ್ದಾರೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.ಇಲ್ಲಿನ ತಯ್ಯಬ್‌ ಮಸೀದಿ ಕಮಿಟಿಯಿಂದ ನಗರದ ಹೀರಾ ಇಂಟರ್‌ ನ್ಯಾಶನಲ್‌ ಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾವಂತ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಮರು ಭಾರತ ದೇಶದ ಮೇಲೆ ಅಪಾರ ಗೌರವ ಹೊಂದಿದ್ದಾರೆ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಹಾಗಾಗಿ ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಐಎಎಸ್‌, ಐಪಿಎಎಸ್‌, ಕೆಎಎಸ್‌ ಅಧಿಕಾರಿಗಳು, ವೈದ್ಯರು, ಎಂಜಿನಿಯರ್‌ಗಳಾಗಬೇಕು. ಈಗಾಗಲೇ ಹಜ್‌ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ವಕ್ಫ್‌ ಆಸ್ತಿ ಬಗ್ಗೆ ಬಿಜೆಪಿಯವರು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಜಮೀರ್‌ ಅಹ್ಮದ್‌ ಖಾನ್‌ ಎಂದಿಗೂ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ. ನಿಯಮದಂತೇ ನಡೆದುಕೊಳ್ಳಲಾಗುತ್ತಿದೆ. ಕಾನೂನು ಮೀರಿ ನಡೆಯಲು ಸಾಧ್ಯ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ಹಿಂದೆ ₹280 ಕೋಟಿ ಸರ್ಕಾರದಿಂದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಂಜೂರಾಗುತ್ತಿತ್ತು. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆದಾಗ ₹3200 ಕೋಟಿ ಅನುದಾನ ಒದಗಿಸಿದ್ದರು. ಈಗ ಕೂಡ ಅಷ್ಟೇ ಹಣ ನೀಡಿದ್ದಾರೆ. ಹಿಂದಿನ ಸರ್ಕಾರ ಶಿಷ್ಯವೇತನ ನಿಲ್ಲಿಸಿತ್ತು. ನಾವು ಈಗ ಶಿಷ್ಯವೇತನ ನೀಡುತ್ತಿದ್ದೇವೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ತೆರಳಿದರೂ ಅನುದಾನ ನೀಡುತ್ತೇವೆ. ಮಹಿಳಾ ಶಿಕ್ಷಣಕ್ಕೂ ಒತ್ತು ನೀಡಲಾಗಿದೆ ಎಂದರು.

ಕೆಎಂಎಫ್‌ ಅಧ್ಯಕ್ಷ ಎಸ್‌. ಭೀಮಾ ನಾಯ್ಕ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಅದರಲ್ಲೂ ಹೊಸಪೇಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಇವರ ಕಲ್ಯಾಣಕ್ಕಾಗಿ ಸಚಿವರು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಜೆ.ಎನ್‌. ಗಣೇಶ್‌ ಮಾತನಾಡಿ, ಅಂಬೇಡ್ಕರ್ ನಮಗೆ ಸಂವಿಧಾನ ನೀಡಿದ್ದಾರೆ. ನಮ್ಮ ಹಕ್ಕುಗಳನ್ನು ನಾವು ಪಡೆದುಕೊಂಡು ಮುನ್ನಡೆಯಬೇಕು. ಶ್ರೀಮಂತರ ಮಕ್ಕಳಿಗೆ ವೇದಿಕೆ ದೊರೆಯುತ್ತದೆ. ಬಡವರ ಮಕ್ಕಳಿಗೆ ವೇದಿಕೆ ದೊರೆಯುವುದಿಲ್ಲ. ತಯ್ಯಬ್‌ ಮಸೀದಿ ಕಮಿಟಿಯವರು ಎಲ್ಲರಿಗೂ ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಉರ್ದು ಅಕಾಡೆಮಿಯ ಮುಫ್ತಿ ಮಹ್ಮದ್‌ ಅಲಿ ಖಾಜಿ, ತಯ್ಯಬ್‌ ಮಸೀದಿ ಕಮಿಟಿಯ ಅಧ್ಯಕ್ಷ ಸಯ್ಯದ್‌ ಯಾಸೀನ್‌, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌ ನಿಯಾಜಿ, ಮುಖಂಡರಾದ ಕೆ. ಬಡಾವಲಿ, ದಾದಾಪೀರ್‌, ಖಾದರ್‌, ನಾಝಿ ಮುದ್ದೀನ್‌, ಮುಜಾಮಿಲ್‌, ಕಮಿಟಿ ಸದಸ್ಯರು, ಮತ್ತಿತರರಿದ್ದರು. ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಗಾಯಕಿ ಕನಕ ಜೋಶಿ ಹಾಡುಗಳನ್ನು ಹಾಡಿದರು.

ಹೊಸಪೇಟೆಯ ಹೀರಾ ಇಂಟರ್‌ ನ್ಯಾಶನಲ್‌ ಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾವಂತ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ತಯ್ಯಬ್‌ ಮಸೀದಿ ಕಮಿಟಿಯಿಂದ ಸಚಿವ ಜಮೀರ್‌ ಅಹ್ಮದ್ ಖಾನ್‌ ಅವರನ್ನು ಸನ್ಮಾನಿಸಲಾಯಿತು.