ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯ ಜನತೆ ರಾಷ್ಟ್ರೀಯತೆ ಪರವಾಗಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕರಾವಳಿಯನ್ನು ಕೋಮುವಾದ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದೇ ಕಾರಣಕ್ಕೆ ಕರಾವಳಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ಜನಪ್ರತಿನಿಧಿಗಳಾದ ನಾವು ಮನವಿ ಮಾಡಿದರೂ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ ಮತ್ತು ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾಕೆ ತಾತ್ಸಾರವೋ ಗೊತ್ತಿಲ್ಲ. ವಿಸಿಟಿಂಗ್ ಮಿನಿಸ್ಟರ್ ಒಬ್ಬರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ. ಅವರು ಇಲ್ಲಿವರೆಗೆ ಎರಡು ಬಾರಿ ಮಾತ್ರ ಇಲ್ಲಿ ರಾತ್ರಿ ಕಳೆದಿದ್ದಾರೆ. ಗೃಹ ಸಚಿವರು ಬೆಳಗ್ಗೆ ಬಂದು ಸಂಜೆ ಹೋಗುತ್ತಾರೆ. ಸಿಎಂ ಭೇಟಿ ವೇಳೆಯಾದರೂ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಪ್ರಗತಿ ಪರಿಶೀಲನೆ ನಡೆಯಲಿದೆ ಎನ್ನುವ ಭರವಸೆ ಇತ್ತು. ಆದರೆ ಅವರ ಪ್ರವಾಸ ಪಟ್ಟಿ ನೋಡಿದಾಗ ಅದೂ ಸುಳ್ಳಾಗಿದೆ ಎಂದರು.ದ.ಕ. ಜಿಲ್ಲೆಗೆ ಭೇಟಿ ನೀಡಿ ಸಂಸದ, ಶಾಸಕರನ್ನು ಭೇಟಿ ಮಾಡಲೂ ಮುಖ್ಯಮಂತ್ರಿಗಳಿಗೆ ಸಮಯವಿಲ್ಲ. ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಣೆ ಮಾಡಿದ ಯೋಜನೆಗಳ ಪಟ್ಟಿಯೇ ಇದೆ. ಆದರೆ ಅದರ ಶಂಕುಸ್ಥಾಪನೆಯೂ ಇಲ್ಲ. ಕೇಂದ್ರ ಪ್ರಾಯೋಜಿತ ಸ್ಮಾರ್ಟ್‌ಸಿಟಿ ಯೋಜನೆಯ ಅನುದಾನದಲ್ಲಿ ನಿರ್ಮಾಣ ಮಾಡಿದ ಕ್ರೀಡಾ ಸಂಕೀರ್ಣ ಮತ್ತು ಜಿಲ್ಲಾಧಿಕಾರಿ ಕಚೇರಿಯ ಉದ್ಘಾಟನೆಗೆ ಸಿಎಂ ಭೇಟಿ ಸೀಮಿತಗೊಂಡಿದೆ ಎಂದರು.ರಾಷ್ಟ್ರೀಯತೆ ಪರವಾಗಿರುವ ಜನರ ವಿರುದ್ಧ ಹಗೆ ಸಾಧಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ. ಅದೇ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಕರಾವಳಿಯನ್ನು ಋುಣಾತ್ಮಕವಾಗಿ ಬಿಂಬಿಸುವ ಕೆಲಸ ಮಾಡುತ್ತಿದೆ ಎಂದು ಸಂಸದರು ಆರೋಪಿಸಿದರು.ಕಳೆದ ವರ್ಷ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆ ಮುಖ್ಯಸ್ಥರ ಸಭೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಯಾವುದೇ ಪ್ರಕರಣದಲ್ಲಿ ಉಗ್ರವಾದ, ರಾಷ್ಟ್ರ ವಿರೋಧಿ ಚಟುವಟಿಕೆಗಳ ಕುರಿತಾದ ಸಂಶಯವಿದ್ದರೆ ಎನ್‌ಐಎ ತನಿಖೆಗೆ ವಹಿಸುವಲ್ಲಿ ವಿಳಂಬ ಮಾಡಬಾರದು ಎಂದು ಹೇಳಿದ್ದಾರೆ. ಹಾಗಿರುವಾಗ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲು ವಿಳಂಬ ಯಾಕೆ? ಯಾರನ್ನು ರಕ್ಷಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.ಮಂಗಳೂರು ನಗರದಲ್ಲಿ ರಾತ್ರಿ ವೇಳೆ ವ್ಯಾಪಾರ ವಹಿವಾಟು, ವಾಹನ ಸಂಚಾರಕ್ಕೆ ಪೊಲೀಸರು ಅಡ್ಡಿ ಪಡಿಸುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೆ ನಮ್ಮ ಮನವಿಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದರು.ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ರಾಜಗೋಪಾಲ ರೈ, ಅರುಣ್ ಶೇಟ್, ಸತೀಶ್ ಪ್ರಭು, ವಸಂತ ಪೂಜಾರಿ ಇದ್ದರು.