‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ವತಿಯಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಿರುವ ಪ್ರೌಢಶಾಲಾ ಮಕ್ಕಳಿಗೆ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ವತಿಯಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಿರುವ ಪ್ರೌಢಶಾಲಾ ಮಕ್ಕಳಿಗೆ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಇದೇ ವೇಳೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್‌) ಮೂಲಕ ಪಿಎಂಎಫ್‌ಎಂಇ ಯೋಜನೆಯ 30 ಯಶಸ್ವಿ ಫಲಾನುಭವಿಗಳ ಯಶೋಗಾಥೆಗಳ ಕುರಿತು ‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿದ್ದ ಸರಣಿ ವರದಿಗಳನ್ನು ಒಳಗೊಂಡ ‘ಬೆಳೆಯಿಂದ ಬ್ರ್ಯಾಂಡ್‌’ ಕೃತಿಯನ್ನೂ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು.

ಗುರುವಾರ ಮುಖ್ಯಮಂತ್ರಿಗಳ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಈ ಎರಡೂ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಕನ್ನಡಪ್ರಭ’ ದಿನಪತ್ರಿಕೆ ಕಾರ್ಯವು ಮೆಚ್ಚುಗೆಗೆ ಪಾತ್ರವಾಗಿದೆ. ಅವರಿಗೆ ಶುಭವಾಗಲಿ. ಸರ್ಕಾರದ ಯೋಜನೆಯ ಲಾಭ ಪಡೆದವರನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಇತರರಿಗೆ ಪ್ರೇರಣೆ ದೊರೆಯುವಂತೆ ಮಾಡಿದ್ದಾರೆ. ಜತೆಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸುತ್ತಿರುವುದು ಉತ್ತಮ ಕಾರ್ಯ ಎಂದರು.

ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣನ್ಯೂಸ್‌ ಮಾದರಿ ಕಾರ್ಯ-ಖಂಡ್ರೆ:

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮಾತನಾಡಿ, ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಏರ್ಪಡಿಸಿರುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳಿಂದ ಮಕ್ಕಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡುತ್ತದೆ. ಪ್ರಕೃತಿ ಸಮತೋಲನವಾಗಿರಬೇಕಾದರೆ ವನ್ಯಜೀವಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ವನ್ಯಜೀವಿ, ಪರಿಸರ, ಅರಣ್ಯದ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣನ್ಯೂಸ್‌ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಮತ್ತು ಇತರರಿಗೂ ಮಾದರಿ ಎಂದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿ ನಂತರದಿಂದ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಕ್ಕಳಿಗೆ ನಮ್ಮ ಅರಣ್ಯ, ಪರಿಸರ, ವನ್ಯಜೀವಿಗಳ ಕುರಿತು ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ನಮ್ಮ ಪೂರ್ವಜರು ಯಾವುದಾದರು ಮರ ನೋಡಿದರೆ ಅದರ ಸಂಪೂರ್ಣ ವಿವರ ಹೇಳುತ್ತಿದ್ದರು. ಈಗಿನ ಮಕ್ಕಳಿಗೆ ಅದರ ಅರಿವಿಲ್ಲ. ಹೀಗಾಗಿಯೇ ರಾಜ್ಯ ಸರ್ಕಾರ ಚಿಣ್ಣರ ವನ ದರ್ಶನ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಮಕ್ಕಳನ್ನು ಅರಣ್ಯಕ್ಕೆ ಕರೆದುಕೊಂಡು ಹೋಗಿ ಅದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಅದೇ ರೀತಿಯ ಕಾರ್ಯವನ್ನು ಇದೀಗ ‘ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣನ್ಯೂಸ್‌’ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ಪತ್ರಿಕೆ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಕನ್ನಡಪ್ರಭ ಪತ್ರಿಕೆಯು ಕೆಪೆಕ್‌ ಸಂಸ್ಥೆಯ ಯೋಜನೆ ಲಾಭ ಪಡೆದ 30 ಯಶಸ್ವಿ ಉದ್ಯಮಿಗಳ ಯಶೋಗಾಥೆ ಪ್ರಕಟಿಸಿದಾಗ ಸಾಕಷ್ಟು ಪ್ರೋತ್ಸಾಹದ ಮಾತುಗಳು ಕೇಳಿಬಂದವು. ಮಾಧ್ಯಮಗಳು ಕೇವಲ ರಾಜಕೀಯ, ಅಪರಾಧ ಸೇರಿ ಇನ್ನಿತರ ಋಣಾತ್ಮಕ ಸುದ್ದಿಗಳನ್ನು ಮಾತ್ರ ಪ್ರಕಟಿಸುತ್ತವೆ ಎಂಬ ಮಾತಿದೆ. ಅದಕ್ಕೆ ಅಪವಾದವಾಗಿ ಕನ್ನಡಪ್ರಭ ಪತ್ರಿಕೆ ಸಮಾಜ ಬದಲಿಸಲು ಸರ್ಕಾರ ಮಾಡಿರುವ ಉತ್ತಮ ಕಾರ್ಯವನ್ನೂ ಪ್ರಕಟಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ. ಆ ಸಾಧಕರ ಯಶೋಗಾಥೆಯ ವರದಿಗಳನ್ನು ಕೆಪೆಕ್‌ ಸಹಯೋಗದಲ್ಲಿ ಪುಸ್ತಕ ರೂಪವಾಗಿ ಹೊರತರಲಾಗಿದೆ ಎಂದು ಹೇಳಿದರು.

ಕೆಪೆಕ್‌ ಸಂಸ್ಥೆಯ ಯೋಜನೆ ಯಶಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾರಣರು. ತಮ್ಮ ಬಜೆಟ್‌ನಲ್ಲಿ ಕೆಪೆಕ್‌ನಿಂದ 5 ಸಾವಿರ ಫಲಾನುಭವಿಗಳಿಗೆ ಲಾಭ ಮಾಡಿಕೊಡುವ ಘೋಷಣೆ ಮಾಡಿದ್ದರು. ಅದರಂತೆ ಕೆಪೆಕ್‌ ಸಂಸ್ಥೆ ಐದಾರು ವರ್ಷಗಳಿಂದಾದ ಕೆಲಸವನ್ನು 6 ತಿಂಗಳಲ್ಲಿ ಮಾಡಿ, 6 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ತನ್ನ ಯೋಜನೆಯ ಲಾಭ ದೊರಕಿಸಿಕೊಟ್ಟಿದೆ. 15 ಲಕ್ಷ ರು. ಬಂಡವಾಳದಿಂದ ಆರಂಭಿಸಿದ ಉದ್ಯಮವೂ 10 ಜನರಿಗೆ ಉದ್ಯೋಗ ನೀಡಿದ ಉದಾಹರಣೆಗಳು ಈ ಯಶೋಗಾಥೆಯಲ್ಲಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ 10 ವರ್ಷಗಳಿಂದ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೆಲಸ ಮಾಡುತ್ತಿದೆ. ಅದನ್ನು ಈಗಲೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಅರಣ್ಯ ಇಲಾಖೆ ಸಹಕಾರದೊಂದಿಗೆ ರಾಜ್ಯದಲ್ಲೇ ಅತಿ ದೊಡ್ಡದಾದ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ತಿಳಿಸಿದಾಗ ಅವರು ಕಳಕಳಿಯಿಂದ ಒಪ್ಪಿಕೊಂಡರು. ಮಕ್ಕಳನ್ನು ಮೊಬೈಲ್‌, ಟಿವಿಯ ವ್ಯಾಮೋಹದಿಂದ ಹೊರತಂದು ಚಿತ್ರಕಲೆಯತ್ತ ಸೆಳೆಯುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಕೆಪೆಕ್‌ ಅಧ್ಯಕ್ಷ ಬಿ.ಎಚ್‌.ಹರೀಶ್‌, ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌ ಪುಷ್ಕರ್‌, ಎಫ್‌ಕೆಸಿಸಿಐ ಅಗ್ರಿಟೆಕ್‌ ಸಮಿತಿ ಅಧ್ಯಕ್ಷೆ ರೂಪಾರಾಣಿ ಇದ್ದರು.

---

ಅರಣ್ಯದ ಅರಿವು ಅಗತ್ಯ

ಪ್ರಕೃತಿ ಸಮತೋಲನವಾಗಿರಬೇಕಾದರೆ ವನ್ಯಜೀವಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ವನ್ಯಜೀವಿ, ಪರಿಸರ, ಅರಣ್ಯದ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣನ್ಯೂಸ್‌ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಮತ್ತು ಇತರರಿಗೂ ಮಾದರಿ.

-ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಸಚಿವ.

---