ಕನ್ನಡಪ್ರಭ ವಾರ್ತೆ ಮುಧೋಳ

ಯುದ್ಧದ ಕಾರಣದಿಂದಾಗಿ ಎಲ್ಪಿಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ಪರ್ಯಾಯವಾಗಿ ಎಥೆನಾಲ್ ಸ್ಟೌ ಬಳಸಲು ಖ್ಯಾತ ಉದ್ಯಮಿ, ಮಾಜಿ ಸಚಿವ ಮುರುಗೇಶ ಆರ್.ನಿರಾಣಿ ಅವರ ಸಲಹೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

ಮುರುಗೇಶ ನಿರಾಣಿ ಶನಿವಾರ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಅಡುಗೆಗೆ ಎಥೆನಾಲ್ ಇಂಧನ ಬಳಕೆಯ ವಿಷಯ ಚರ್ಚೆಗೆ ಬಂತು. ಇದೊಂದು ಸರಳ ಮತ್ತು ಸುಲಭವಾಗಿ ಕಾರ್ಯರೂಪಕ್ಕೆ ತರುವ ಸಲಹೆಯಾಗಿದೆ. ಕಬ್ಬು, ಭತ್ತ, ಮೆಕ್ಕೆಜೋಳ ಬೆಳೆಯುವ ರೈತರ ಆರ್ಥಿಕ ಉನ್ನತಿಗೂ ಇದು ಅನುಕೂಲವಾಗುವುದು. ಸಾಧ್ಯವಿರುವ ಕಡೆ ಮಹಾರಾಷ್ಟ್ರದಲ್ಲಿ ಬಳಕೆಗೆ ಪ್ರೋತ್ಸಾಹಿಸುವುದಾಗಿ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಮಹಾರಾಷ್ಟ್ರದ ಸಿಎಂ ತಿಳಿಸಿದರು. ಪುಣೆ ನಿಂಬಕರ್ ಕೃಷಿ ಸಂಶೋಧನಾ ಕೇಂದ್ರ ಸ್ಟೇನ್ಲೆಸ್ ಸ್ಟೀಲ್ ಎಥೆನಾಲ್ ಸ್ಟೌ ಅಭಿವೃದ್ಧಿಪಡಿಸಿದ ಸಂಗತಿಯನ್ನು ಎಂ.ಆರ್. ನಿರಾಣಿ ಅವರು ಮಹಾರಾಷ್ಟ್ರ ಸಿಎಂಗೆ ವಿವರಿಸಿದರು. ಅನೇಕ ಮುಂದುವರಿದ ದೇಶಗಳು ಅಡುಗೆ ಮನೆಯ ಇಂಧನವಾಗಿ ಎಥೆನಾಲ್ ಬಳಸುತ್ತಿವೆ. ನಮ್ಮಲ್ಲಿಯೂ ಈ ಚಿಂತನೆ ಸಾಕಾರಗೊಳ್ಳಬೇಕೆಂಬ ಆಶಯ ನಿರಾಣಿ ಅವರು ತಮ್ಮ ಮಾತುಕತೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಇದೊಂದು ಸೌಹಾರ್ದ ಭೇಟಿಯಾಗಿತ್ತೆಂದು ಮುರುಗೇಶ ನಿರಾಣಿ ಅವರು ತಿಳಿಸಿದ್ದಾರೆ. ಈ ವೇಳೆ ಶಾಸಕ ರಾಹುಲ್ ಕೂಲ್ ಅವರು ಇದ್ದರು.