ಒಳ ಮೀಸಲಾತಿಗೆ ಸಿಎಂ ಮೀನಮೇಷ ಸಲ್ಲ: ಸಂಸದ ಗೋವಿಂದ ಕಾರಜೋಳ

| Published : Dec 16 2024, 12:46 AM IST

ಸಾರಾಂಶ

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಡಿ.16ರಂದು ಒಳ ಮೀಸಲಾತಿಗಾಗಿ ಹೋರಾಟ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಅಶಾಂತಿ ಸೃಷ್ಟಿಸಬಾರದು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಒಳ ಮೀಸಲಾತಿ ನೀಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಆ.1ರಂದು ರಾಜ್ಯಕ್ಕೆ ನೀಡಿದ್ದು, ಈ ಕೂಡಲೇ ಸಿಎಂ ಸಿದ್ದರಾಮಯ್ಯ ರವರು ಒಳಮೀಸಲಾತಿ ಜಾರಿಗೆ ತರಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ತರುವಲ್ಲಿ ಸಿಎಂ ಸಿದ್ದರಾಮಯ್ಯ ಮೀನಮೇಷ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಎಸ್.ಎಂ.ಕೃಷ್ಣ ಸರ್ಕಾರ ನ್ಯಾ.ಎ.ಜೆ.ಸದಾಶಿವ ಆಯೋಗ ರಚನೆ ಮಾಡಿತು. ಆದರೆ, ಬಿಡಿಗಾಸು ಹಣ ನೀಡಲಿಲ್ಲ. ಆಯೋಗದ ಅಧ್ಯಕ್ಷರಿಗೆ ಟೇಬಲ್, ಖುರ್ಚಿ ಸಹ ಇರಲಿಲ್ಲ. ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ₹13.5 ಕೋಟಿ ವರದಿ ಸಿದ್ಧಪಡಿಸಲು ಅನುದಾನ ನೀಡಿತು. ವರದಿ ಸ್ವೀಕರಿಸುವ ಹೊತ್ತಿಗೆ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದರು.

2013ರಲ್ಲಿ ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆದಾಗ ಸಿಎಂ ಸಿದ್ದರಾಮಯ್ಯ ಜಾರಿಗೊಳಿಸುವ ಭರವಸೆ ನೀಡಿದರು. ಆಗಲು ಮಾಡಲಿಲ್ಲ. ವರದಿ ಕೂಡಾ ಸ್ವೀಕರಿಸಲಿಲ್ಲ. ಬಳಿಕ ಬಿಜೆಪಿ ಸರ್ಕಾರ ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. 2023ರ ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅದು ಕೂಡಾ ಈಡೇರಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಶಾಂತಿಯುತ ಹೋರಾಟ ನಡೆಸಿ:

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಡಿ.16ರಂದು ಒಳ ಮೀಸಲಾತಿಗಾಗಿ ಹೋರಾಟ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಅಶಾಂತಿ ಸೃಷ್ಟಿಸಬಾರದು. ಶಾಂತಿಯುತವಾಗಿ ಹೋರಾಟ ನಡೆಸಬೇಕು. ಸದನ ಒಳಗೆ-ಹೊರಗೆ ಸತ್ಯಾಂಶ ಹೊರ ಬರಬೇಕು. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅವಧಿಯಲ್ಲಿ ಎಸ್ಸಿ ಶೇ.15 ರಿಂದ ಶೇ.17 ವರೆಗೆ ಹಾಗೂ ಎಸ್ಟಿ ಮೀಸಲಾತಿ ಶೇ.3 ರಿಂದ ಶೇ.7ರವರೆಗೆ ಹೆಚ್ಚಿಸಿತು. ಒಳ ಮೀಸಲಾತಿ ವಿಷಯದಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿತು. ಯಾವುದೇ ಕಾರಣಕ್ಕೂ ಇದು ಇನ್ನೊಬ್ಬರಿಗೆ ಮಾಡುತ್ತಿರುವ ಅನ್ಯಾಯವಲ್ಲ. ಅಣ್ಣ ತಮ್ಮಂದಿರು ತಮ್ಮ ಜನ ಸಂಖ್ಯಾ ಅನುಗುಣವಾಗಿ ಪಾಲು ಹಂಚಿಕೆ ಮಾತ್ರ. ಇದರಲ್ಲಿ ಯಾರನ್ನು ಮೀಸಲಾತಿಯಿಂದ ಕೈ ಬಿಟ್ಟು ಹೋಗುವದಿಲ್ಲ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಮುಖಂಡರಾದ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಮಲ್ಲಯ್ಯ ಮುಗುನೂರಮಠ, ಸತ್ಯಾನಾರಾಯಣ ಹೇಮಾದ್ರಿ, ಕೆಎಂಎಫ್ ನಿರ್ದೇಶಕ ವಿವೇಕಾನಂದ ಪಾಟೀಲ(ರಾಜು ಗೌಡ) ಇತರರಿದ್ದರು.