ಸಾರಾಂಶ
ಧಾರವಾಡ:
ಸುಮಾರು ₹ 5000 ಕೋಟಿಯ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ತಪ್ಪಿಸಿಕೊಳ್ಳಲು ಅನ್ಯರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮೇಲಿನ ಮುಡಾ ದಾಳಿಯು ನಿರೀಕ್ಷಿತ ಘಟನೆ. ಸಿದ್ದರಾಮಯ್ಯ ಅವರು, ನಿವೇಶನ ಮರಳಿ ನೀಡಿದರೂ ಕೂಡ ಮುಡಾ ಅಧ್ಯಕ್ಷ ಮರಿಗೌಡರ ರಾಜೀನಾಮೆ ಕೊಡಿಸಿರುವುದು ಏತಕೆ? ಎಂದು ಪ್ರಶ್ನಿಸಿದರು.
ಮುಡಾದಲ್ಲಿ ಸಿದ್ದರಾಮಯ್ಯರ ತಪ್ಪಿಲ್ಲದಿದ್ದರೆ, ಮರಿಗೌಡರಿಂದ ರಾಜೀನಾಮೆ ಕೊಡಿಸಿದ್ದು ಏಕೆ? ಮುಡಾ ಪ್ರಕರಣದಲ್ಲಿ ಮರಿಗೌಡರ ಕೈವಾಡ ಇದೆ ಎಂದು ಬಿಂಬಿಸುವ ಉದ್ದೇಶಕ್ಕಾಗಿಯೇ ಅವರ ರಾಜೀನಾಮೆ ಕೊಡಿಸಲಾಗಿದೆ ಎಂದು ದೂರಿದರು.ಮುಡಾ ಹಗರಣ ದೊಡ್ಡದಾದ ಹಿನ್ನಲೆ ಇದೀಗ ಇಡಿ ಅಧಿಕಾರಿಗಳ ಆಗಮನ ಆಗಿದೆ. ಇನ್ಮುಂದೆ ಸರಿಯಾದ ತನಿಖೆ ನಡೆಯುವ ವಿಶ್ವಾಸವೂ ಇದೆ. ಇದರಲ್ಲಿ ಭಾಗಿಯಾದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಿದ್ದರೂ, ಶಿಕ್ಷೆಯಾಗಬೇಕು ಎಂದು ಹೇಳಿದರು.
ಕೊರಳಿಗೆ ಬಿದ್ದ ಹಗ್ಗ:ಮುಡಾ ಹಾಗೂ ವಾಲ್ಮೀಕಿ ಹಗರಣದ ಹಗ್ಗವು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಕೊರಳಿಗೆ ಬಿಗಿಯುತ್ತಿದೆ. ಅಲ್ಲದೇ, ಉಭಯ ಪ್ರಕರಣಗಳು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತ ಸಾಗಿವೆ. ಈಗ ಇಡಿ ದಾಳಿಯೂ ಮಾಡಿ, ಹೆಚ್ಚಿನ ದಾಖಲೆ ವಶಕ್ಕೆ ಪಡೆದಿದ್ದು, ಅಧಿಕಾರಿಗಳು ದಾಖಲೆಗಳ ಜತೆಗೆ ಅನೇಕ ಜನರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ ಎಂದು ಬೆಲ್ಲದ ಭವಿಷ್ಯ ನುಡಿದರು.
ಮತ್ತೊಂದಡೆ ಲೋಕಾಯುಕ್ತ ತನಿಖೆಯೂ ಅತ್ಯಂತ ನಿಧಾನವಾಗಿ ಸಾಗಿದೆ. ಲೋಕಾಯುಕ್ತ ರದ್ದುಗೊಳಿಸಿದ ಕೀರ್ತಿಯೂ ಸಿದ್ದರಾಮಯ್ಯರಿಗೆ ಸಲ್ಲಲಿದೆ. ಈಗ ಪುನಃ ಲೋಕಾ ಬಂದರೂ, ಕೆಲಸ ಮಾಡುವ ಸ್ವಾತಂತ್ರ್ಯ ನೀಡದ ಬಗ್ಗೆ ದೂರಿದರು.