ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಗೆ ₹2443 ಕೋಟಿ ಬಿಡುಗಡೆ ಮಾಡಿದ್ದು ಇನ್ನೂ ಮೂರ್ನಾಲ್ಕು ದಿನದಲ್ಲಿ ಪ್ರತಿ ಫಲಾನುಭವಿಯ ಬ್ಯಾಂಕ್ ಖಾತೆಗೆ 32ನೇ ಕಂತಿನ ಹಣ ಡಿಬಿಟಿ ಮುಖಾಂತರ ಜಮೆ ಆಗಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.ಜಿಬಿಎ ವ್ಯಾಪ್ತಿಯ ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ ಪ್ರತಿ ಯಜಮಾನಿಯರಿಗೆ ₹62 ಸಾವಿರ ತಲುಪಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಇದುವರೆಗೂ ₹1,46,443 ಕೋಟಿ ಹಣವನ್ನು ಖರ್ಚು ಮಾಡಿದೆ ಎಂದರು.
ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯಲು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿತರಲ್ಲಿ 1,95,224 ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗೆ ಸುಮಾರು ₹115 ಕೋಟಿ ಹಣ ಸಂದಾಯವಾಗಿದೆ. ಮೃತ ಫಲಾನುಭವಿಗಳ ಹೆಸರನ್ನು 15 ದಿನದಲ್ಲಿ ಪಟ್ಟಿಯಿಂದ ಕೈಬಿಡುವ ಸಂಬಂಧ ಸರ್ಕಾರ ಶೀಘ್ರದಲ್ಲೇ ಮಾರ್ಗಸೂಚಿ ರಚಿಸಲಿದೆ ಎಂದರು.