ದೇವರಾಜ ಅರಸು ಅವರು ಒಬ್ಬ ಮುತ್ಸದ್ದಿ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದಾರೆ, ಆದರೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದರಲ್ಲಿ ಸಾಧನೆ ಮಾಡಿದ್ದಾರೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುದೇವರಾಜ ಅರಸು ಅವರು ಒಬ್ಬ ಮುತ್ಸದ್ದಿ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದಾರೆ, ಆದರೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದರಲ್ಲಿ ಸಾಧನೆ ಮಾಡಿದ್ದಾರೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಾಡು ಕಂಡ ಶ್ರೇಷ್ಠ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತದ ದಿನಗಳ ದಾಖಲೆ ಮುರಿದಿದ್ದಾರೆ. ನೀವು ಅಧಿಕಾರದಲ್ಲಿ ಎಷ್ಟು ದಿನ ಇದ್ದಿರಿ ಎನ್ನುವುದು ಮುಖ್ಯವಲ್ಲ. ಇದ್ದ ದಿನಗಳಲ್ಲಿ ಜನರಿಗಾಗಿ ಏನು ಮಾಡಿದಿರಿ ಎಂಬುದು ಮುಖ್ಯ ಎಂದು ಪ್ರಶ್ನಿಸಿದರು.ಅರಸು ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಜವಾಗಿ ಶ್ರಮಿಸಿದವರು. ಅದಕ್ಕಾಗಿ ಅವರು ತಮ್ಮ ಜಾತಿಯವರಲ್ಲದ ಎಲ್.ಜಿ. ಹಾವನೂರು ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿ ಅವರು ಕೊಟ್ಟ ವರದಿಯನ್ನು ಬಲಿಷ್ಠ ಸಮುದಾಯಗಳ ವಿರೋಧದ ನಡುವೆಯೂ ಜಾರಿಗೊಳಿಸಿದರು. ಮುಂದೆ ಇದು ಯಾರಿಗೂ ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದು ಅರಸು ಅವರು ಹಿಂದುಳಿದ ವರ್ಗಗಳ ಜನರ ಜೀವನದ ದೊಡ್ಡ ಆಶಾಕಿರಣ ಎನಿಸಿದ್ದಾರೆ ಎಂದರು.ಸಿದ್ದರಾಮಯ್ಯನವರು ತಮ್ಮದೇ ಸಮುದಾಯದ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆಗೆ ಅಯೋಗ ನೇಮಿಸಿದರು. ಅದಕ್ಕಾಗಿ ಜನರ ತೆರಿಗೆಯ 180 ಕೋಟಿ ರುಪಾಯಿಗಳನ್ನು ವ್ಯಯ ಮಾಡಿದರು. ಕಾಂತರಾಜು ಕೊಟ್ಟ ವರದಿಯ ಮೇಲೆ ಇವರೇ ಹತ್ತು ವರ್ಷ ಕುಳಿತುಕೊಂಡರು. ಅದನ್ನು ಜಾರಿಗೊಳಿಸಲಿಲ್ಲ ಎಂದು ಬೇರೆಯವರ ವಿರುದ್ಧ ದೂರಿದರು.ಅರಸು ಅವರು ಮಾಡಿದ್ದು ಜನ ಕೇಂದ್ರಿತ ರಾಜಕಾರಣ. ಅದಕ್ಕಾಗಿಯೇ ಅವರು ಭೂ ಸುಧಾರಣೆ ತಂದರು.ಅಲ್ಲಿಯೂ ಅವರು ಬಲಿಷ್ಠ ವರ್ಗಗಳನ್ನು ಎದುರು ಹಾಕಿಕೊಂಡು ಅವರ ಜಮೀನು ವಶಪಡಿಸಿಕೊಂಡು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಅನೇಕ ಬಡವರು, ದಲಿತರು, ಕೂಲಿಕಾರರು ಭೂಮಿಯ ಒಡೆಯರು ಆಗುವಂತೆ ಮಾಡಿದರು. ಸಿದ್ದರಾಮಯ್ಯನವರು ಅದೇ ಬಡವರ ನಿವೇಶನಗಳನ್ನು ತಮ್ಮ ಹೆಂಡತಿಯ ಹೆಸರಿಗೆ ಬರೆಸಿಕೊಂಡರು.ಅರಸು ಅವರು ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿವಾರಿಸಿ ಆ ಕೆಲಸ ಮಾಡುತ್ತಿದ್ದ ಭಂಗಿ ಕುಟುಂಬಗಳಿಗೆ ಘನತೆ ತಂದುಕೊಟ್ಟರು ಎಂದು ಸುರೇಶ್‌ಗೌಡ ಹೇಳಿದರು.

ಸಿದ್ದರಾಮಯ್ಯನವರು ಒಡೆದು ಆಳುವ ರಾಜಕಾರಣ ಮಾಡಿದರು. ಮುಸ್ಲಿಂ ಮತ್ತು ಹಿಂದೂಗಳನ್ನು ಒಡೆದು ಆಳುವುದರಲ್ಲಿ ಅವರು ತಮ್ಮ ರಾಜಕಾರಣದ ಅಸ್ತಿತ್ವವನ್ನು ಕಂಡುಕೊಂಡರು. ಅದಕ್ಕಾಗಿಯೇ ಇವತ್ತು ಕರ್ನಾಟಕ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ. ರೋಮ್ ನಗರಕ್ಕೆ ಬೆಂಕಿ ಹೊತ್ತಿಕೊಂಡಾಗ ನೀರೋ ಪಿಟೀಲು ನುಡಿಸುತ್ತಿದ್ದ ಎನ್ನುವ ಹಾಗೆ ಸಿದ್ದರಾಮಯ್ಯನವರು ಜನರನ್ನು ಬೆಂಕಿಗೆ ತಳ್ಳಿ ತಾವು ಮೈ ಕಾಯಿಸಿಕೊಳ್ಳುತ್ತಿದ್ದಾರೆ ಎಂದರು.ಅರಸು ಅವರು ಬಿಡಿ. ಸಿದ್ದರಾಮಯ್ಯನವರ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ ಅವರು ಕೇವಲ 5 ವರ್ಷ 216 ದಿನ ಅಧಿಕಾರದಲ್ಲಿ ಇದ್ದರು. ಅವರು ಮಾಡಿದ ಒಂದು ಕೆಲಸವನ್ನಾದರೂ ಸಿದ್ದರಾಮಯ್ಯ ಮಾಡಲಿಲ್ಲ. ಹೆಗಡೆಯವರು ಪಂಚಾಯಿತಿರಾಜ್ ವ್ಯವಸ್ಥೆ ತಂದು ಅಧಿಕಾರ ವಿಕೇಂದ್ರೀಕರಣಕ್ಕಾಗಿ ಇಡೀ ದೇಶದಲ್ಲಿ ಒಂದು ಮಾದರಿ ಒದಗಿಸಿದರು. ಸಿದ್ದರಾಮಯ್ಯನವರು ಇದುವರೆಗೆ ಪಂಚಾಯಿತಿ ಚುನಾವಣೆಗಳನ್ನು ಮಾಡಿಲ್ಲ. ಅವುಗಳನ್ನು ಮುಂದೂಡುವುದರಲ್ಲಿ ಅವರು ನಿರತರಾಗಿದ್ದಾರೆ ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯಗೂಳೂರು ಶಿವಕುಮಾರ್, ಬಿಜೆಪಿ ಮುಖಂಡರಾದ ನರಸಿಂಹಮೂರ್ತಿ, ಪ್ರಭಾಕರ್, ವಿಜಯಕುಮಾರ್, ವೆಂಕಟೇಶ್, ಓಂ ನಮೋ ನಾರಾಯಣ, ಸ್ವಾಮಿ, ಶಿವರಾಜ್ ಇತರರು ಉಪಸ್ಥಿತರಿದ್ದರು.

ಕೋಟ್‌... ಅರಸು ಅವರ ಬದ್ಧತೆಎಲ್ಲಿ? ಸಿದ್ದರಾಮಯ್ಯನವರ ಆಷಾಢಭೂತಿತನ ಎಲ್ಲಿ? ಎತ್ತಣ ಮಾಮರ! ಎತ್ತಣ ಕೋಗಿಲೆ? ಅರಸು ಅವರದು ನಿಸ್ವಾರ್ಥ ರಾಜಕಾರಣ. ಸಿದ್ದರಾಮಯ್ಯನವರದು ಪರಮ ಸ್ವಾರ್ಥದ ರಾಜಕಾರಣ. ಅವರು ಯಾವಾಗಲೂ ರಾಜಕಾರಣದಲ್ಲಿ ಇರುವುದು ಸಿದ್ದರಾಮಯ್ಯನವರಿಗಾಗಿ, ಸಿದ್ದರಾಮಯ್ಯನವರದು ಮತ್ತು ಸಿದ್ದರಾಮಯ್ಯನವರಿಂದ ಎಂದು ತಿಳಿಯುತ್ತಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆ. ರಾಜಕಾರಣ ಹೀಗೆ ವ್ಯಕ್ತಿಕೇಂದ್ರಿತ ಆಗಿರಬಾರದು, ಅದು ಜನ ಕೇಂದ್ರಿತ ಆಗಿರಬೇಕು. - ಬಿ.ಸುರೇಶ್‌ಗೌಡ, ಗ್ರಾಮಾಂತರ ಕ್ಷೇತ್ರದ ಶಾಸಕ