ಸಾರಾಂಶ
ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅಡಳಿತಕ್ಕೆ ಜನರು ಕೊಟ್ಟ ತೀರ್ಪು ಇದಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ತರೀಕೆರೆ : ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅಡಳಿತಕ್ಕೆ ಜನರು ಕೊಟ್ಟ ತೀರ್ಪು ಇದಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ತರೀಕೆರೆ ಬ್ಲಾಕ್ ಕಾಂಗ್ರೆಸ್ ನಿಂದ ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಸಂದರ್ಭದ ಸಭೆಯಲ್ಲಿ ಮಾತನಾಡಿದರು.
ಎಸ್. ಸಿದ್ದರಾಮಯ್ಯ ಅವರ ಮೇಲೆ ಒಂದೂ ಕಪ್ಪು ಚುಕ್ಕೆ ಇಲ್ಲ, ಅಪಪ್ರಚಾರ ಮಾಡಿದ್ದಕ್ಕೆ ಮತದಾರರು ತಕ್ಕ ಶಾಸ್ತಿ ಮಾಡಿದ್ದಾರೆ. ಎಸ್.ಸಿದ್ದರಾಮಯ್ಯ ಅವರ ಶ್ರೀಮತಿ ಪಾರ್ವತಮ್ಮಅವರಿಗೆ ಕಣ್ಣೀರು ಹಾಕಿಸಿದ್ದು ಬಿಜೆಪಿಯವರಿಗೆ ಶಾಪವಾಗಿದೆ. ಚೆನ್ನಪಟ್ಟಣ ಮತ್ತು ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಮಕ್ಕಳು ಸೋತಿದ್ದಾರೆ. ಚೆನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಹೇಳಿದರು.
ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾಯಕತ್ವ ಗೆದ್ದಿದೆ. ಪಕ್ಷದ ಎಲ್ಲ ನಾಯಕರು ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಚೆನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ವಯನಾಡುನಲ್ಲಿ ಪಕ್ಷದ ವರಿಷ್ಠರಾದ ಪ್ರಿಯಾಂಕ ಗಾಂಧಿ ಮತ್ತು ಜಾರ್ಖಂಡ್. ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ರಾಜಕೀಯ ಮುತ್ಸದ್ದಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯಲು ಹೊರಟಿದ್ದರು. ಆದರೆ ದೈವಸಂಕಲ್ಪ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಎಲ್ಲ ವರ್ಗಕ್ಕೆ ಅಧಿಕಾರ ದೊರೆಯುವುದು ದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ. ಉಪ ಚುನಾವಣೆ ಫಲಿತಾಂಶವನ್ನು ಇಡೀ ದೇಶ ನೋಡುತ್ತಿತ್ತು, ಯಾರು ಅಭಿವೃದ್ಧಿ ಮಾಡುತ್ತಾರೆ ಅವರಿಗೆ ಗೆಲುವು ನಿಶ್ಚಿತ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಉಸ್ತುವಾರಿ ಸಮಿತಿ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಪುರಸಭೆ ಮಾಜಿ ಅಧ್ಯಕ್ಷೆ ಹೇಮಲತ ರೇವಣ್ಣ, ಟಿ.ಎಸ್.ಧರ್ಮರಾಜ್, ಕಾಂಗ್ರೆಸ್ ಸೇವಾದಳ ತಾಲೂಕು ಘಟಕ ಅಧ್ಯಕ್ಷ ಜಗದೀಶ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮಹಮದ್ ಇರ್ಷಾದ್ ಮುಖಂಡರಾದ ಗಿರಿರಾಜ್, ಅಮ್ಜದ್ ಪಾಷ, ದಿನೇಶ್ ಕುಮಾರ್, ಪಕ್ಷದ ಕಾರ್ಯಕರ್ತರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.