ಸಿಎಂರ ‘ಸೂಟ್‌ಕೇಸ್’ ಕೆಲಸ ಮಾಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶೇಷ ಕ್ಯಾಬಿನೆಟ್ ಮಾಡಿ ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ಕೊಡುತ್ತೇವೆ ಎಂದು ಜನರಿಗೆ ಪೊಳ್ಳು ಭರವಸೆ ನೀಡಿ ಇಲ್ಲಿಯವರೆಗೆ ಎಷ್ಟು ಸಾವಿರ ಕೋಟಿ ಬಿಡುಗಡೆ ಮಾಡಿದ್ದೀರಿ?. ನಿಮ್ಮ ‘ನಮ್ಮ ನಡೆ, ಕೃಷ್ಣೆ ಕಡೆ’ ಘೋಷಣೆ ಎಲ್ಲಿ ಹೋಯ್ತು ಎಂದು ಜನರಿಗೆ ಉತ್ತರ ಕೊಡಿ. ನಿಮ್ಮ ಗ್ಯಾರಂಟಿ ಬಗ್ಗೆ ವಿಶ್ವಾಸ ಇದ್ದರೆ ಸೂಟ್‌ಕೇಸ್ ಸಮೇತ ಇಲ್ಲಿ ಯಾಕೆ ಠಿಕಾಣಿ ಹೂಡಿದ್ದೀರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಶ್ನೆಯ ಸುರಿಮಳೆಗೈದರು.ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ವಿಜಯೇಂದ್ರ, ಮಂಗಳವಾರ ನವನಗರದ ವಾರ್ಡ್ ನಂ.31, 35, 19ರಲ್ಲಿ ಮನೆ,ಮನೆಗೆ ತೆರಳಿ ಮತಯಾಚನೆ ಮಾಡಿದರು. ಬಳಿಕ, ಕಾರ್ಯಕರ್ತರ ಮನೆಯಲ್ಲಿ ಚಹ ಸೇವಿಸಿದರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅನುದಾನ ವಿಚಾರವಾಗಿ ಸಿಎಂ ಅವರು ಬೊಗಳೆ ಹೊಡೆದುಕೊಂಡೆ ಮೂರು ವರ್ಷ ಕಳೆದಿದ್ದಾರೆ. ನಾಲ್ಕು ತಿಂಗಳ ಹಿಂದೆ ವಿಶೇಷ ಕ್ಯಾಬಿನೆಟ್ ಮಾಡಿ ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದರು. ಒಂದು ಎಕರೆ ನೀರಾವರಿ ಭೂಮಿಗೆ ₹40 ಲಕ್ಷ, ಒಣಭೂಮಿಗೆ ₹30 ಲಕ್ಷ ಅಂತ ಹೇಳಿದ್ದರು. ಈಗ ಎಷ್ಟು ಬಿಡುಗಡೆಯಾಗಿದೆ ಎಂದು ಉತ್ತರ ಕೊಡಲಿ. 2010ರಲ್ಲಿ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಆಂಧ್ರ ಮತ್ತು ತೆಲಂಗಾಣದವರು ವಿವಾದ ಹುಟ್ಟು ಹಾಕಿದರು. ಆಗಿನ ಯುಪಿಎ ಸರ್ಕಾರ ನಾಲ್ಕು ವರ್ಷ ಏನೂ ಕ್ರಮ ಕೈಗೊಳ್ಳಲಿಲ್ಲ. ಈಗ ಕೇಂದ್ರದ ಮೇಲೆ ಗೂಬೆ ಕೂಡಿಸಿಕೊಂಡು, ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಕುತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿ ಕಾರಿದರು.ಹಿಂದೂ ಕಾರ್ಯಕರ್ತರ ಮನೆಗೆ ವಿಜಯೇಂದ್ರ ಭೇಟಿ:
ಕಳೆದ ತಿಂಗಳು ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಮತ್ತು ಗಲಭೆ ಸಂಬಂಧ ಬಂಧಿತರಾಗಿರುವ ಕಿಲ್ಲಾಗಲ್ಲಿಯ ಹಿಂದೂ ಕಾರ್ಯಕರ್ತರ ಪೋಷಕರನ್ನು ವಿಜಯೇಂದ್ರ ಭೇಟಿ ಮಾಡಿದರು. ನಂತರ, ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ್ ಬಾರಕೇರ ಅವರ ಆರೋಗ್ಯ ವಿಚಾರಿಸಿದರು.