ಸಾರಾಂಶ
ಪೊಲೀಸರು ಲಾಠಿ ಪ್ರಹಾರ ಮಾಡಿರುವುದನ್ನು ಖಂಡಿಸಿ ಪಂಚಮಸಾಲಿ ಸಮಾಜದವರು ನಗರದ ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಗಂಗಾವತಿಯ ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಹೋರಾಟಕನ್ನಡಪ್ರಭ ವಾರ್ತೆ ಗಂಗಾವತಿ
ಪೊಲೀಸರು ಲಾಠಿ ಪ್ರಹಾರ ಮಾಡಿರುವುದನ್ನು ಖಂಡಿಸಿ ಪಂಚಮಸಾಲಿ ಸಮಾಜದವರು ನಗರದ ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಒಂದು ಗಂಟೆಗಳ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು.
ಈ ಸಂದರ್ಭ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ, ಪಂಚಮಸಾಲಿ ಸಮಾಜಕ್ಕೆ ಸಿಎಂ ಮೀಸಲಾತಿ ನೀಡಲೇಬೇಕು. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಅವರ ಅಪ್ಪ ಮೀಸಲಾತಿ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಐಪಿಎಸ್ ಅಧಿಕಾರಿಯಾಗಿದ್ದ ಹಿತೇಂದ್ರ ಈ ಹಿಂದೆ ಯಡಿಯೂರಪ್ಪ ಮತ್ತು ತಮಗೂ ಕಿರುಕುಳ ನೀಡಿದ ಅಧಿಕಾರಿಯಾಗಿದ್ದಾರೆ. ಮುಖ್ಯಮಂತ್ರಿಗಳು ಇವರಿಗೆ ಪ್ರಚೋದನೆ ನೀಡಿ ಲಾಠಿ ಪ್ರಹಾರ ಮಾಡಿಸುವುದಕ್ಕೆ ಕಾರಣರಾಗಿದ್ದಾರೆಂದು ದೂರಿದರು. ಕೂಡಲೆ ಮುಖ್ಯಮಂತ್ರಿಗಳು ಪಂಚಮಸಾಲಿ ಸಮಾಜಕ್ಕೆ ಮತ್ತು ಸ್ವಾಮೀಜಿಯವರಿಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಸರ್ಕಾರ ಇವರ ಶಾಪದಿಂದ ಸರ್ವ ನಾಶವಾಗುವುದು ಖಚಿತ ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಯಾವುದೇ ಸಮಾಜ ತಮ್ಮ ಹಕ್ಕನ್ನು ಕೇಳಲು ಸರ್ಕಾರದ ಮುಂದೆ ಬಂದಾಗ ಮುಖ್ಯಮಂತ್ರಿಗಳು ಅದನ್ನು ಕೇಳುವ ಸೌಜನ್ಯ ಇರಬೇಕು. ಆದರೆ ಲಾಠಿ ಪ್ರಹಾರ ಮಾಡಿಸಿ ದರ್ಪ ತೋರಿಸಿರುವುದು ಸರಿಯಲ್ಲ ಎಂದರು. ಕೂಡಲೆ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲಾ ಲಿಂಗಾಯತ ಸಮಾಜದವರು ಮುಖ್ಯಮಂತ್ರಿಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಕೊಟ್ಟೂರು ಸ್ವಾಮೀಜಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಪ್ರಮುಖರಾದ ಕಳಕನಗೌಡ, ಮನೋಹರಗೌಡ, ಮಹಾಲಿಂಗಪ್ಪ ಬನ್ನಿಕೊಪ್ಪ, ಎ.ಕೆ. ಮಹೇಶ, ಚೆನ್ನವೀರನಗೌಡ, ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಹೊಸಕೇರಿ ಗಿರೇಗೌಡ, ವೀರೇಶ ಸೂಳೆಕಲ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.