ಶಿಗ್ಗಾಂವಿ: ರಾಜ್ಯದ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದ್ದು, ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಬಿಟ್ಟು ಹೋದ ಹಣಕಾಸಿನ ಸ್ಥಿತಿ ಕುರಿತು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಶನಿವಾರ ಶಿಗ್ಗಾಂವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಗುತ್ತಿಗೆದಾರರ ₹23 ಸಾವಿರ ಕೋಟಿ ಬಿಲ್ಲು ಬಾಕಿ ಪಾವತಿಸಲು ಶಾಸಕ, ಸಚಿವ, ಅಧಿಕಾರಿಗಳಿಂದ ಭ್ರಷ್ಟಾಚಾರದ ಕಿರುಕುಳ ಆರೋಪಗಳು ಕೇಳಿ ಬರುತ್ತಿದೆ. ಇದನ್ನು ಹೇಗೆ ಸರಿಪಡಿಸಲಿದ್ದಾರೆ? ಕಾನೂನು ಬಿಟ್ಟು ಕೆಲಸ ಮಾಡಬೇಡಿ ಎಂದು ಹೇಳುವ ಬದಲು, ವ್ಯವಸ್ಥೆ ಬಿಟ್ಟು ಹೋಗಬೇಡಿ ಎಂದು ಹೇಳಿದ ನೂತನ ಸಿಎಂ ಡಿ.ಕೆ. ಶಿವಕುಮಾರ ಅವರ ಸಿಸ್ಟಂ ಏನು? ಎಂದು ಬೊಮ್ಮಾಯಿ ಪ್ರಶ್ನಿಸಿದರು.

ರಾಜ್ಯ ಹಣಕಾಸು ದುಸ್ಥಿತಿ ದೊಡ್ಡ ಪ್ರಮಾಣದಲ್ಲಿದೆ. ಆದರೆ, ಸುಧಾರಿಸುವ ಚಿಂತನೆ ಈವರೆಗೂ ಸಿಎಂ., ಡಿಸಿಎಂ ಅವರಿಗಿಲ್ಲ. ಡಿಕೆಶಿ ಅವರಿಗೆ ವೈಟ್ ಪೇಪರ್ ಕೊಟ್ಟು ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಬಿಟ್ಟು ಹೋದ ಹಣಕಾಸಿನ ಸ್ಥಿತಿ ಕುರಿತು ಎಷ್ಟು ಸಾಲ, ಎಲ್ಲೆಲ್ಲಿ ಮಾಡಿದ್ದಾರೆ. ಎಲ್ಲೆಲ್ಲಿ ಉಪಯೋಗ ಆಗಿದೆ? ಬಂಡವಾಳದ ಹೂಡಿಕೆಯಲ್ಲಿ ಆಗಿದೆಯೇ? ಅಥವಾ ನಿತ್ಯ ಸಂಬಳ, ಪೆನ್ಸನ್, ಸಾಲ ಮರುಪಾವತಿಗೆ ಆಗಿದೆಯೇ? ಗ್ಯಾರಂಟಿಗಳಿಗಷ್ಟೇ ಉಪಯೋಗ ಆಗಿದೆಯಾ? ಶೇಕಡಾ 90ಕ್ಕಿಂತ ಹೆಚ್ಚು ಕಮಿಟೆಡ್ ಎಕ್ಸಪೆಂಡಿಚರ್ ಆಗಿದೆ. ಅದು ಒಳ್ಳೆಯದು ಆದರೆ, ಅಭಿವೃದ್ಧಿಗೆ ನಯಾ ಪೈಸೆ ಕೊಟ್ಟಿಲ್ಲ. ಆದರೆ, 4.5 ಲಕ್ಷ ಕೋಟಿ ಬಜೆಟ್ ಮಾಡಿದ್ದಾರೆ. ಅದರ ಶೇ.90ರಷ್ಟು ಬದ್ದತಾ ವೆಚ್ಚಕ್ಕೆ ಹೋಗುತ್ತಿದೆ. ಯಾವ ಅಭಿವೃದ್ಧಿ ಕಾರ್ಯಕ್ಕೆ ಹೋಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕವನ್ನು ಯಾವ ರೀತಿ ಮುನ್ನಡೆಸುತ್ತಾರೆ ಸಿಎಂ ಶಿವಕುಮಾರ ಸಾರ್ವಜನಿಕವಾಗಿ ತಿಳಿಸಬೇಕು ಅದು ಅವರ ಜವಾಬ್ದಾರಿ ಎಂದರು.

ಮುಖ್ಯಮಂತ್ರಿ ಬದಲಾವಣೆಯಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕರ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ, ಪಕ್ಷದ ಮುಂದೆ ಚರ್ಚೆಯಾಗಲಿ, ಸೂಚನೆಯಾಗಲಿ ಯಾವುದು ಇಲ್ಲ. ಅಂತಹ ಪ್ರಸಂಗವೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.