ನೈತಿಕತೆ ಇದ್ದರೆ ಮುಖ್ಯಮಂತ್ರಿ ರಾಜಿನಾಮೆ ನೀಡಲಿ: ಜೆಡಿಎಸ್‌ ಜಿಲ್ಲಾಧ್ಯಕ್ಷ ಮುನೇಗೌಡ

| Published : Aug 10 2024, 01:35 AM IST

ನೈತಿಕತೆ ಇದ್ದರೆ ಮುಖ್ಯಮಂತ್ರಿ ರಾಜಿನಾಮೆ ನೀಡಲಿ: ಜೆಡಿಎಸ್‌ ಜಿಲ್ಲಾಧ್ಯಕ್ಷ ಮುನೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಹಾಗೂ ಜನಾಂದೋಲನ ಕಾರ್ಯಕ್ರಮಕ್ಕೆ ಭಾಗಿಯಾಗಲು ದೊಡ್ಡಬಳ್ಳಾಪುರದಿಂದ ಶುಕ್ರವಾರ 500ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರು ಬೆಂ.ಗ್ರಾ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ.ಮುನೇಗೌಡ ನೇತೃತ್ವದಲ್ಲಿ ತೆರಳಿದರು.

-ಮೈಸೂರು ಚಲೋ ಪಾದಯಾತ್ರೆಗೆ ತೆರಳಿದ ಜೆಡಿಎಸ್‌ ಕಾರ್ಯಕರ್ತರುಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಹಾಗೂ ಜನಾಂದೋಲನ ಕಾರ್ಯಕ್ರಮಕ್ಕೆ ಭಾಗಿಯಾಗಲು ದೊಡ್ಡಬಳ್ಳಾಪುರದಿಂದ ಶುಕ್ರವಾರ 500ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರು ಬೆಂ.ಗ್ರಾ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ.ಮುನೇಗೌಡ ನೇತೃತ್ವದಲ್ಲಿ ತೆರಳಿದರು.

ಇಲ್ಲಿನ ಜೆಡಿಎಸ್‌ ಕಚೇರಿ ಮುಂಭಾಗದಲ್ಲಿ ಜನಾಂದೋಲನಕ್ಕೆ ತೆರಳಿದ ಕಾರ್ಯಕರ್ತರ ಬಸ್ಸುಗಳಿಗೆ ಮುನೇಗೌಡ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆ ಅಕ್ರಮ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣವರ್ಗಾವಣೆ ಪ್ರಕರಣ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ನಡೆ ಶಂಕಾಸ್ಪದವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿತ್ತು. ಆದರೆ ಅಧಿಕಾರಕ್ಕೆ ಅಂಟಿಕೊಂಡು ಜನದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ಹಗರಣ ಹೊರಬಂದ ತಕ್ಷಣ ಸಚಿವ ಬಿ.ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಕ್ಲೀನ್‌ಚಿಟ್‌ ನೀಡಿದ್ದರು. ಆದರೆ ಬಳಿಕ ನಾಗೇಂದ್ರ ಬಂಧನವಾಯಿತು. ಸ್ವಾರ್ಥ ರಾಜಕಾರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹಿಂದಿನ ಸರ್ಕಾರ ಅನುಮತಿ ನೀಡಿದ್ದ ಟೆಂಡರ್‌ಗಳು, ಆದೇಶಗಳನ್ನು ತಡೆಹಿಡಿಯಿತು. ಅದೇ ರೀತಿ ಮುಡಾ ನಿವೇಶನ ಹಂಚಿಕೆ ವಿಚಾರದಲ್ಲೂ ಅಕ್ರಮ ಹಂಚಿಕೆಯನ್ನು ರದ್ದು ಮಾಡಬಹುದಿತ್ತು. ಹಾಗೆ ಮಾಡುವ ಬದಲು ತಮ್ಮನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರವನ್ನು ಜನಸಾಮಾನ್ಯರು ಪ್ರಶ್ನಿಸುವ ಮಟ್ಟಿಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ, ಮುಡಾ ನಿವೇಶನಗಳ ಹಂಚಿಕೆ ಅಕ್ರಮವು ಚರ್ಚೆಯ ಕೇಂದ್ರ ಬಿಂದುವಾಗಿ ರಾಷ್ಟ್ರಮಟ್ಟದಲ್ಲೂ ಗಮನಸೆಳೆದಿವೆ. ''''''''''''''''ಅಹಿಂದ'''''''''''''''' ಹೆಸರು ಹೇಳಿಕೊಂಡು ಅಧಿಕಾರ, ಸಾಮಾಜಿಕ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಸಾರುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಹಗರಣಗಳು ಸುತ್ತುವರಿದಿವೆ. ಭ್ರಷ್ಟಚಾರಮುಕ್ತ ಆಡಳಿತ ಕೊಡುತ್ತೇವೆ ಎಂದು ಭರವಸೆಯಿತ್ತವರು, ಅಧಿಕಾರದ ಗದ್ದುಗೆ ಏರಿದ 15 ತಿಂಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವುದು ಅಕ್ಷಮ್ಯ ಎಂದರು.

ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲೂಕಿನಿಂದ ಸಾವಿರಾರು ಮಂದಿ ಬಿಜೆಪಿ-ಜೆಡಿಎಸ್‌ ಪಕ್ಷಗಳ ಕಾರ್ಯಕರ್ತರು ಪಾದಯಾತ್ರೆ, ಜನಾಂದೋಲನದಲ್ಲಿ ಭಾಗವಹಿಸುತ್ತಿದ್ದು, ಶುಕ್ರವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡು,ಶನಿವಾರ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಮಣ್ಣ, ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ನಗರ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ಶಶಿ, ಸತೀಶ್‌, ಧರ್ಮೇಂದ್ರ, ಪ್ರಭಾಕರ್, ರಾಮದಾಸ್, ಕೆಂಪೇಗೌಡ, ಶ್ರೀನಿವಾಸ್‌, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.