ಮೇಷ್ಟ್ರಾಗಿ ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಸಂವಿಧಾನ ಪಾಠ

| Published : Dec 04 2024, 01:32 AM IST

ಸಾರಾಂಶ

ಈ ಹಿಂದೆ ಸದನದಲ್ಲಿ ಶಾಸಕರಿಗೆ ಕನ್ನಡ ವ್ಯಾಕರಣದ ಪಾಠ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ಮೇಷ್ಟ್ರಾಗಿ ಮಕ್ಕಳಿಗೆ ಸಂವಿಧಾನದ ಕುರಿತು ಪಾಠ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಈ ಹಿಂದೆ ಸದನದಲ್ಲಿ ಶಾಸಕರಿಗೆ ಕನ್ನಡ ವ್ಯಾಕರಣದ ಪಾಠ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ಮೇಷ್ಟ್ರಾಗಿ ಮಕ್ಕಳಿಗೆ ಸಂವಿಧಾನದ ಕುರಿತು ಪಾಠ ಮಾಡಿದರು.

ಹೌದು, ಇದಕ್ಕೆ ಸಾಕ್ಷಿಯಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು.ಮಂಗಳವಾರ ಕರ್ನಾಟಕ ಟ್ರಸ್ಟ್‌ ವತಿಯಿಂದ ‘ಸಂವಿಧಾನದ ಓದು ಅಭಿಯಾನ’ದ ಅಂಗವಾಗಿ ಗೃಹಕಚೇರಿ ಕೃಷ್ಣಾದಲ್ಲಿ ಸಂವಿಧಾನ ಓದು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವೃತ್ತಿಪರ ಶಿಕ್ಷಕರು ಕೂಡ ನಾಚುವಂತೆ ಸಂವಿಧಾನದ ಶ್ರೇಷ್ಠತೆ, ಪ್ರಾಮುಖ್ಯತೆ, ಅವಶ್ಯಕತೆ ಕುರಿತು ವಿದ್ಯಾರ್ಥಿಗಳಿಗೆ ಒಂದು ಗಂಟೆಗೂ ಹೆಚ್ಚುಕಾಲ ಪಾಠ ಮಾಡಿ ಗಮನ ಸೆಳೆದರು. ವಿದ್ಯಾರ್ಥಿಗಳು ಮೈಮರೆತು ಪಾಠ ಆಲಿಸಿದ್ದು ವಿಶೇಷ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನದ ಶ್ರೇಷ್ಠತೆ ಮತ್ತು ವಿಫಲತೆ ಅದು ಯಾರ ಕೈಯಲ್ಲಿ ಇದೆ ಎನ್ನುವ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎನ್ನುವ ಅಂಬೇಡ್ಕರ್‌ ಅವರ ಮಾತು ಮತ್ತು ನಮ್ಮದು ಸರ್ವ ಜನಾಂಗದ ಶಾಂತಿ ತೋಟ ಎನ್ನುವ ಕುವೆಂಪು ಅವರ ಮಾತು ಉಲ್ಲೇಖಿಸಿ ಸಂವಿಧಾನದ ಆಶಯವೇನು ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಿದರು.ಭಾರತ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮದವರಿಗೆ ಸಮಾನವಾಗಿ ನಡೆಸಿಕೊಳ್ಳುವುದು ನಮ್ಮ ದೇಶದ ಗುಣ. ಇದೇ ಸಂವಿಧಾನದ ಮೌಲ್ಯ. ಭಾರತದಲ್ಲಿ ಅಸಮಾನತೆ ಸೃಷ್ಟಿಯಾಗಿದ್ದು ಜಾತಿ ವ್ಯವಸ್ಥೆಯಿಂದ. ಜಾತಿ ಆಧಾರದ ಮೇಲೆ ಒಬ್ಬರ ಯೋಗ್ಯತೆ ಅಳೆಯುವುದು ಅನಾಗರಿಕತನ ಎಂದು ಹೇಳಿದರು.ಸಂವಿಧಾನದ ಪೀಠಿಕೆಯಲ್ಲೇ ಇಡೀ ಸಂವಿಧಾನದ ಸಾರಾಂಶ ಇದೆ. ಜಾತ್ಯತೀತತೆ, ಸಾಮಾಜಿಕ ನ್ಯಾಯ ಎರಡೂ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಬಳಿಕ ಸೇರ್ಪಡೆಯಾಯಿತು. ಇದನ್ನು ತೆಗೆಯಬೇಕು ಎಂದು ಕೆಲವರು ಸುಪ್ರೀಂಕೋರ್ಟ್ ಗೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು. ಇದು ಶ್ಲಾಘನೀಯ ಕಾರ್ಯ ಎಂದರು.ಹಿಂದೆ ವಿದ್ಯೆ ಮತ್ತು ಸಂಪತ್ತು ಗಳಿಸುವ ಅವಕಾಶ ಶೂದ್ರರಿಗೆ ಮತ್ತು ಮಹಿಳೆಯರಿಗೆ ಇರಲಿಲ್ಲ. ಹೀಗಾಗಿ ಅಸಮಾನತೆ ಸೃಷ್ಟಿಯಾಯಿತು. ಅಪ್ಪ, ಅಮ್ಮ ವಿದ್ಯಾವಂತರಾದರೆ ಮಾತ್ರ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡುತ್ತಾರೆ ಎಂದ ಅವರು, ತಾವು ವಿದ್ಯಾಭ್ಯಾಸದಿಂದ ವಂಚಿತರಾಗಿ ನಂತರ ಶಿಕ್ಷಣ ಕಲಿತು ವಕೀಲರಾದ ಬಗೆಯನ್ನು ವಿವರಿಸಿದರು.ಶಿಕ್ಷಣದಿಂದ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು, ಕರ್ತವ್ಯಗಳನ್ನು ಅರಿತುಕೊಳ್ಳಲು ಸಾಧ್ಯ. ಅದಕ್ಕಾಗಿಯೇ ಸಂವಿಧಾನ ಓದು ಅಭಿಯಾನ ರಾಜ್ಯಾದ್ಯಂತ ಆರಂಭಿಸಲಾಗಿದೆ. ಸಂವಿಧಾನ ದ್ರೋಹಿಗಳು ಸಮಾಜ ದ್ರೋಹಿಗಳು, ಜನ ವಿರೋಧಿಗಳು. ಜಾತಿ, ಧರ್ಮದ ಹೆಸರಲ್ಲಿ ಒಬ್ಬರನ್ನು ಅಗೌರವದಿಂದ ಕಾಣುವುದು, ಮತ್ತೊಬ್ಬರು ಸಂವಿಧಾನೇತರ ಗೌರವ ನಿರೀಕ್ಷಿಸುವುದು ತಪ್ಪು. ಈ ದೇಶ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಲ್ಲ. ಮಕ್ಕಳು ಸಂವಿಧಾನ ಓದಿ ತಿಳಿಯಬೇಕು ಎಂದರು.ಫೋಟೋಗೃಹ ಕಚೇರಿ ಕೃಷ್ಣಾದಲ್ಲಿ ‘ಸಂವಿಧಾನ ಓದು’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.