ಗ್ಯಾರಂಟಿ ಸಮಾವೇಶಕ್ಕೆ ಇಂದು ಸಿಎಂ ಸಿದ್ದರಾಮಯ್ಯ

| Published : Mar 12 2024, 02:04 AM IST

ಸಾರಾಂಶ

ಚಾಮರಾಜನಗರಕ್ಕೆ ಬರಲು ಈ ಹಿಂದಿನ ಸಿಎಂಗಳು ಹಿಂದೇಟು ಹಾಕಿದ್ದರೇ? ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕದೇ ಎರಡನೇ ಸಿಎಂ ಅವಧಿಯಲ್ಲಿ ಎರಡನೇ ಬಾರಿಗೆ ಗಡಿಜಿಲ್ಲೆಗೆ ಮಂಗಳವಾರ ಭೇಟಿ ಕೊಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರಕ್ಕೆ ಬರಲು ಈ ಹಿಂದಿನ ಸಿಎಂಗಳು ಹಿಂದೇಟು ಹಾಕಿದ್ದರೇ? ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕದೇ ಎರಡನೇ ಸಿಎಂ ಅವಧಿಯಲ್ಲಿ ಎರಡನೇ ಬಾರಿಗೆ ಗಡಿಜಿಲ್ಲೆಗೆ ಮಂಗಳವಾರ ಭೇಟಿ ಕೊಡಲಿದ್ದಾರೆ.

ಸಿಎಂ ಆದ ಮೂರು ತಿಂಗಳಿಗೇ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಕೆಡಿಪಿ ಸಭೆ ನಡೆಸಿದ್ದ ಸಿದ್ದರಾಮಯ್ಯ ಈಗ ಎರಡನೇ ಬಾರಿ ಭೇಟಿ ನೀಡುತ್ತಿದ್ದು, ಮಾ.12 ರ ಮಧ್ಯಾಹ್ನ 3 ಕ್ಕೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಿದ್ಧತೆಯು ಭರದಿಂದ ನಡೆಯುತ್ತಿದ್ದು ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು 20 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.ಕ್ರೀಡಾಂಗಣದಲ್ಲಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು ಸಿಎಂ, ಡಿಸಿಎಂಗೆ ಆನೆಯ ಕಲಾಕೃತಿ ಕೊಡಲು ಜಿಲ್ಲಾಡಳಿತ ನಿರ್ಧರಿಸಿದೆ. ಇನ್ನು, ಫಲಾನುಭವಿಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದ್ದು 30 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಸಿಎಂ ಲೋಕಸಭಾ ಕ್ಷೇತ್ರ: ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರವೂ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು ಲೋಕ ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ ಎರಡು ಬಾರಿ ಪೂರ್ವಭಾವಿ ಸಭೆ ನಡೆಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಸೂಚನೆ ಕೊಟ್ಟಿದ್ದಾರೆ. ಚಾಮರಾಜನಗರದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮೂವರು ಕೈ ಶಾಸಕರಿರುವ ಹಿನ್ನೆಲೆ ಸಮಾವೇಶಕ್ಕೆ ಭಾರೀ ಜನ ಸೇರುವ ನಿರೀಕ್ಷೆ ವ್ಯಕ್ತವಾಗಿದೆ.ಮೊದಲ ಅವಧಿಯಲ್ಲಿ 15 ಕ್ಕೂ ಹೆಚ್ಚು ಬಾರಿ ಭೇಟಿ:

ಮೊದಲ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ 15 ಕ್ಕೂ ಅಧಿಕ ಬಾರಿ ಭೇಟಿ ಕೊಟ್ಟು 5 ವರ್ಷ ಸುಭದ್ರವಾಗಿ ಆಡಳಿತ ನಡೆಸಿ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ಅಳಿಸಿದ್ದರು. ಭೇಟಿ ನೀಡುವ ಜೊತೆಗೆ, ಸಾವಿರಾರು ಕೋಟಿ ಅನುದಾನವನ್ನೂ ಗಡಿಜಿಲ್ಲೆಗೆ ಹರಿಸಿದ್ದರು‌.ಧ್ರುವ ಸ್ಮರಣೆಯಲ್ಲಿ ಭಾಗಿ:ಮಾಜಿ ಸಂಸದ ದಿ‌.ಆರ್.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಯಲಿದೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಚಾಮರಾಜನಗರಕ್ಕೆ 11.30 ಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರು ಮೊದಲು ಹೆಗ್ಗವಾಡಿಗೆ ತೆರಳಿ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ,ಮಧ್ಯಾಹ್ನ 3 ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.