ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ಘನತೆಗೆ ಧಕ್ಕೆ : ರೇಣುಕಾಚಾರ್ಯ

| N/A | Published : Apr 28 2025, 12:49 AM IST / Updated: Apr 28 2025, 01:33 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಮರ್ಯಾದೆ ಕಳೆಯುತ್ತಿದ್ದಾರೆ. ಇದರಿಂದ ರಾಜ್ಯದ ಘನತೆಗೆ ಧಕ್ಕೆಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

  ದಾವಣಗೆರೆ : ಉಗ್ರರು ಪಹಲ್ಗಾಂನಲ್ಲಿ ಪ್ರವಾಸಿಗರ ಮಾರಣಹೋಮ ಮಾಡಿದ ಬಗ್ಗೆ ಇಡೀ ದೇಶವೇ ಆಕ್ರೋಶ ಹೊರ ಹಾಕುತ್ತಿದ್ದರೆ, ಪಾಕಿಸ್ತಾನದ ಜೊತೆ ಯುದ್ಧ ಅನಿವಾರ್ಯವಲ್ಲವೆನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಮರ್ಯಾದೆ ಕಳೆಯುತ್ತಿದ್ದಾರೆ. ಇದರಿಂದ ರಾಜ್ಯದ ಘನತೆಗೆ ಧಕ್ಕೆಯಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಡವಳಿಕೆಯಿಂದಲೇ ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಟುತ್ತಿದ್ದು, ಈಗ ಪಾಕಿಸ್ತಾನದ ಜೊತೆಗೆ ಯುದ್ಧ ಅನಿವಾರ್ಯವಲ್ಲವೆಂದ ಮಾತನ್ನೇ ಪಾಕಿಸ್ತಾನದ ಮಾಧ್ಯಮಗಳಲ್ಲಿ ವೈಭ‍ವೀಕರಿಸಲಾಗುತ್ತಿದೆ. ಸಿದ್ದರಾಮಯ್ಯ ಭಾರತ ಪರವೋ, ಪಾಕಿಸ್ತಾನದ ಪರವೋ ಎಂಬುದನ್ನು ಸ್ಪಷ್ಚಪಡಿಸಲಿ ಎಂದರು.

ದೇಶದ ಹಿತದೃಷ್ಟಿಯಿಂದ ಕೇಂದ್ರ ಕೈಗೊಳ್ಳುವ ತೀರ್ಮಾನಕ್ಕೆ ಸಿಎಂ ಸಿದ್ದರಾಮಯ್ಯ ಬದ್ಧರಿರಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಕಾಂಗ್ರೆಸ್ಸಿನದ್ದು ದ್ವಿಮುಖ ನೀತಿಯಾಗಿದ್ದು, ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು. ಪಾಕಿಸ್ತಾನದ ಸುದ್ದಿ ವಾಹಿನಿಗಳಲ್ಲಿ ರಾಜ್ಯ, ರಾಷ್ಟ್ರದ ಮಾನ ಕಳೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ದೂರಿದರು.

ಕಾಶ್ಮೀರದಲ್ಲಿ 370ನೇ ವಿಧಿ ರದ್ಧು ಮಾಡಿದ್ದರಿಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿದೆ. ಹಾಗಾಗಿ ಇಂತಹ ಘಟನೆ ನಡೆಯುತ್ತಿವೆಯೆಂದ ರಾಬರ್ಟ್‌ ವಾದ್ರಾ ಸೇರಿದಂತೆ ಅವನದೇ ಮನಸ್ಥಿತಿಯ ಸಚಿವರು, ಶಾಸಕರು ಯಾರೇ ಆಗಿದ್ರೂ ಭಾರತ ವಿರೋಧಿ ಹೇಳಿಕೆ ನೀಡಿದವರಿಗೆ ಗುಂಡಿಟ್ಟು ಹೊಡೆದರೆ ದೇಶ ಸರಿಯಾಗುತ್ತದೆ. ಪಹಲ್ಗಾಂನಲ್ಲಿ ಪ್ರವಾಸಿಗರ ಹತ್ಯೆ ಖಂಡನೀಯ. ಪಕ್ಷಾತೀತವಾಗಿ ಇಂತಹ ಕೃತ್ಯ ಖಂಡಿಸಬೇಕು. ಧರ್ಮದ ಆಧಾರದಲ್ಲಿ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ ಉಗ್ರರ ಕೃತ್ಯ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಭ್ರಷ್ಟಾಚಾರ, ಅತ್ಯಾಚಾರದ ಭಾಗ್ಯಗಳ ನಂತರ ಸಿಎಂ ಸಿದ್ದರಾಮಯ್ಯ ಈಗ ಮತ್ತೊಂದು ಭಾಗ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂಬುದಾಗಿ ಹೇಳಿಕೆ ನೀಡಿ, ತಮ್ಮ ಓಟು ಬ್ಯಾಂಕ್ ಭದ್ರಪಡಿಸಿಕೊಳ್ಳುವ ಹೀನ ಮನಸ್ಥಿತಿ ಪ್ರದರ್ಶಿಸಿರುವುದಕ್ಕೆಇದೊಂದು ತಾಜಾ ನಿದರ್ಶನವಾಗಿದೆ. ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದು ಕಡೆ ಕುಕ್ಕರ್ ಬ್ಲಾಸ್ಟ್ ಮಾಡಿದ್ದವರನ್ನು ಡಿಸಿಎಂ ಡಿ.ಕೆ.ಶಿವಕುಮಾರ ತಮ್ಮ ಬ್ರದರ್ಸ್ ಎನ್ನುತ್ತಾರೆ. ಕಾಂಗ್ರೆಸ್ಸಿನವರಿಗೆ ದೇಶ, ಜನರ ಜೀವದ ಚಿಂತೆ ಇಲ್ಲ. ತಮಗೆ, ತಮ್ಮ ಪಕ್ಷಕ್ಕೆ ಓಟು ಬ್ಯಾಂಕ್ ಗಟ್ಟಿಯಾಗಬೇಕು, ಓಟು ಬ್ಯಾಂಕ್ ಮುಖ್ಯ ಎಂಬ ಧೋರಣೆ ಇದೆ ಎಂದು ಟೀಕಿಸಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಮುಸ್ಲಿಮರಿಗೆ ಭದ್ರತೆ ಇಲ್ಲ. ಹಾಗಾಗಿ ಇಂತಹ ಘಟನೆ ನಡೆಯುತ್ತಿವೆಯೆಂಬ ಹೇಳಿಕೆ ನೀಡಿದ್ದಾರೆ. ಇಂತಹ ಮಾತುಗಳನ್ನಾಡಲು ನಾಚಿಕೆ ಆಗಬೇಕು. ಪಾಕಿಸ್ತಾನ, ಬಾಂಗ್ಲಾ ದೇಶದವರು ವೀಸಾ ಅವದಿ ಮುಗಿದಿದ್ದರೂ ದೇಶದ ಮೂಲೆ ಮೂಲೆಗಳಲ್ಲಿ, ದೊಡ್ಡ ನಗರಗಳಲ್ಲಿ ಇದ್ದಾರೆ. ಅಂತಹವರನ್ನು ಹುಡುಕಿ ಈ ದೇಶದಿಂದ ಒದ್ದೋಡಿಸಬೇಕು ಎಂದು ಆಗ್ರಹಿಸಿದರು.

ಭದ್ರತಾ ವೈಫಲ್ಯವೆಂದು ಯಾರೂ ಸಹ ಯೋಧರ ಮಾನಸಿಕ ಧೈರ್ಯ ಕುಗ್ಗಿಸುವ ಕೆಲಸ ಮಾಡಬಾರದು. ಯೋಧರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಭಯೋತ್ಪಾದಕರನ್ನು ಹುಡುಕಿ ಹೊಡೆಯುತ್ತಾರೆ. ಕೇಂದ್ರದ ನಿರ್ಧಾರಕ್ಕೆ ಎಲ್ಲರೂ ಬದ್ಧರಿರಬೇಕು ಎಂದರು.

ಹಿಂದೆ ಬಾಲಾಕೋಟ್ ಮೇಲೆ ಸರ್ಜಿಕಲ್ ದಾಳಿ ನಡೆದಾಗಲೂ ಸೈನಿಕರ ಕಾರ್ಯಾಚರಣೆ ಬಗ್ಗೆಯೇ ಕಾಂಗ್ರೆಸ್ ಸೇರಿದಂತೆ ವಿಪಕ್ಷದರು ಅವಮಾನಿಸಿದ್ದರು. ಇನ್ನಾದರೂ ದೇಶದ ಭದ್ರತೆ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್ ನಿರ್ನಾಮವಾಗಲಿದೆ. ಕಾಶ್ಮೀರದ ಪಹಲ್ಗಾಂನಲ್ಲಿ ಕೇಂದ್ರದ ಭದ್ರತಾ ವೈಫಲ್ಯವಾಗಿಲ್ಲ. ಅಲ್ಲಿನ ಮೈತ್ರಿ ಸರ್ಕಾರದಿಂದ ಆದ ವೈಫಲ್ಯ ಇದಾಗಿದೆ.

ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.