ಕಾಂಗ್ರೆಸ್ ಔಟ್‌ ಗೋಯಿಂಗ್ ಸರ್ಕಾರ, ಬಿಜೆಪಿ ಇನ್ ಕಮ್ಮಿಂಗ್‌ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

| N/A | Published : Apr 20 2025, 02:06 AM IST / Updated: Apr 20 2025, 12:55 PM IST

MP Renukacharya
ಕಾಂಗ್ರೆಸ್ ಔಟ್‌ ಗೋಯಿಂಗ್ ಸರ್ಕಾರ, ಬಿಜೆಪಿ ಇನ್ ಕಮ್ಮಿಂಗ್‌ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ವಿದ್ಯಾನಿಧಿ ಸೇರಿದಂತೆ ಕಾಂಗ್ರೆಸ್ಸಿನ ಐದೂ ಗ್ಯಾರಂಟಿ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ಕಾಂಗ್ರೆಸ್‌ ಸರ್ಕಾರ ಔಟ್ ಗೋಯಿಂಗ್ ಸರ್ಕಾರವಾಗಿದ್ದು, ಬಿಜೆಪಿ ಇನ್‌ಕಮಿಂಗ್‌ ಸರ್ಕಾರವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆ: ರಾಜ್ಯದಲ್ಲಿ ವಿದ್ಯಾನಿಧಿ ಸೇರಿದಂತೆ ಕಾಂಗ್ರೆಸ್ಸಿನ ಐದೂ ಗ್ಯಾರಂಟಿ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ಕಾಂಗ್ರೆಸ್‌ ಸರ್ಕಾರ ಔಟ್ ಗೋಯಿಂಗ್ ಸರ್ಕಾರವಾಗಿದ್ದು, ಬಿಜೆಪಿ ಇನ್‌ಕಮಿಂಗ್‌ ಸರ್ಕಾರವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಶನಿವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತುಘಲಕ್ ದರ್ಬಾರ್ ನಡೆಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರವು ಅಹಿಂದ ವರ್ಗಕ್ಕೂ ಯಾವುದೇ ಕೊಡುಗೆ ನೀಡಿಲ್ಲ. ಅಧಿಕಾರಕ್ಕೆ ಬಂದ ನಂತರ ಹಾಲಿನಿಂದ ಆಲ್ಕೋಹಾಲ್‌ವರೆಗೆ ಸುಮಾರು 50 ಅಗತ್ಯ ವಸ್ತುಗಳ ಬೆಲೆಗಳ ಏರಿಸಿದೆ. ಕಾಂಗ್ರೆಸ್ಸಿಗೆ ಮತ ಹಾಕಿದ್ದ ಜನರಿಗೂ ಸಿದ್ದರಾಮಯ್ಯ ಸರ್ಕಾರದ ಬೆಲೆ ಏರಿಕೆ ಬಿಸಿತಟ್ಟುತ್ತಿದೆ ಎಂದು ದೂರಿದರು.

ರಾಜ್ಯದ ಜನತೆ ಕಾಂಗ್ರೆಸ್ಸಿನ ದುರಾಡಳಿತದಿಂದ ರೋಸಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಜನರು ಕಾಂಗ್ರೆಸ್ ಸರ್ಕಾರದವರನ್ನು ಕೈಯಲ್ಲಿ ಬಡಿಗೆ ಹಿಡಿದು, ಬೆನ್ನು ಹತ್ತುವ ದಿನಗಳು ದೂರವಿಲ್ಲ. ಇಂತಹವರಿಗೆ ದೇಶದಲ್ಲಿ ಒಳ್ಳೆಯ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು. ಜನಾಕ್ರೋಶ ಯಾತ್ರೆಗೆ ರಾಜ್ಯವ್ಯಾಪಿ ಜನರಿಂದ ಸ್ಪಂದನೆ ಸಿಗುತ್ತಿದೆ. ಕಾಂಗ್ರೆಸ್ ವಿರುದ್ಧ ಜನ ರೋಸಿರುವುದಕ್ಕೆ ಇದೇ ಸಾಕ್ಷಿ ಎಂದು ರೇಣುಕಾಚಾರ್ಯ ತಿಳಿಸಿದರು.

4 ಸಲ ಸಂಸದರಾಗಿ ನಿಮ್ಮ ಕೊಡುಗೆ ಏನು? 

ಯಾರಿಗೆ ನಮ್ಮ ಪಕ್ಷ ಅಂತಾ ಬರುತ್ತದೋ, ಅಂತಹವರು ಬಂದೇ ಬರುತ್ತಾರೆ. ಬಿಜೆಪಿ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಸ್ವಪ್ರೇರಣೆಯಿಂದ, ತಮ್ಮ ಕರ್ತವ್ಯವೆಂದು ಭಾಗಿಯಾಗಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಜನರು ಈಗಾಗಲೇ ಅಂತಹವರನ್ನು ಮರೆತೇ ಬಿಟ್ಟಿದ್ದಾರೆ. ತಮ್ಮ ಸ್ವಯಂಕೃತ ಅಪರಾಧದಿಂದ ಸೋತವರು ಪಕ್ಷದ ಕಾರ್ಯಕರ್ತರಿಗೂ ಅನ್ಯಾಯ ಮಾಡಿದ್ದಾರೆ. ನಾಲ್ಕು ಅವಧಿಗಳಿಗೆ ಸಂಸದರಾದರೂ, ಆರು ಸಲ ಅದೇ ಕುಟುಂಬದವರನ್ನು ಸಂಸದರಾಗಿ ಮಾಡಿದರೂ ದಾವಣಗೆರೆ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ? ಜಿಲ್ಲೆಗೆ ನಿಮ್ಮ ಕೊಡುಗೆಯಾದರೂ ಏನು ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರನ್ನು ರೇಣುಕಾಚಾರ್ಯ ಪ್ರಶ್ನಿಸಿದರು.

ನಮಗೆ ಯಾರಾದರೂ ಕರೆದರೆಂದು ನಾನಾಗಲೀ, ಹಿರಿಯ ನಾಯಕರಾದ ಎಸ್.ಎ.ರವೀಂದ್ರನಾಥ್ ಇತರರು ಬಂದಿದ್ದೇವಾ? ನಮ್ಮ ಪಕ್ಷವೆಂದು ನಾವು ಬರುತ್ತೇವೆ. ಇದು ನಮ್ಮ ಕರ್ತವ್ಯ. ಕೆಲವರು ಹೋಗದಂತೆ ದಾರಿ ತಪ್ಪಿಸುತ್ತಾರೆ. ಚುನಾವಣೆ ಸಂದರ್ಭ ಲಾಬಿ ಮಾಡಿ, ಟಿಕೆಟ್ ಪಡೆಯುವಾಗ ಯಾರಾದರೂ ಕರೆದಿರುತ್ತಾರಾ? ಪಕ್ಷದ ಜಿಲ್ಲಾಧ್ಯಕ್ಷರು ಎಲ್ಲದರ ಮಾಹಿತಿ ನೀಡಿದರೂ ಕೆಲವರು ಬರುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಭಿನ್ನಮತ ಮಾಡುವುದಕ್ಕೆ ಸಮಯ ಸಾಕಾಗುತ್ತಿಲ್ಲ ಎನಿಸುತ್ತದೆ ಎಂದು ವ್ಯಂಗ್ಯವಾಡಿದರು.