ಮೇ.15ರ ಒಳಗಾಗಿ ಮಹಾಸಂಗಮ ಸಮಾವೇಶ: ಎಂ.ಪಿ.ರೇಣುಕಾಚಾರ್ಯ

| Published : Mar 16 2025, 01:45 AM IST

ಸಾರಾಂಶ

ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶವನ್ನು ಮೇ.15ರ ಒಳಗಾಗಿ ದಾವಣಗೆರೆಯಲ್ಲಿ ಸಂಘಟಿಸುವುದಾಗಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ಸಂಘಟನೆ ಸಂಕಲ್ಪ । ರವೀಂದ್ರನಾಥ್‌ ನೇತೃತ್ವದಲ್ಲಿ ಸಮಾವೇಶ ನಿರ್ಧಾರ

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶವನ್ನು ಮೇ.15ರ ಒಳಗಾಗಿ ದಾವಣಗೆರೆಯಲ್ಲಿ ಸಂಘಟಿಸುವುದಾಗಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಬಿಜೆಪಿಯ ವೀರಶೈವ ಲಿಂಗಾಯತ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ 17 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಉಳಿದ 11ರ ಜಿಲ್ಲೆಗಳಿಗೆ ಹೋಗಿ, ಸಮಾಜದ ಮುಖಂಡರ ಸಭೆ ಮಾಡಲಿದ್ದೇವೆ ಎಂದರು.

ಸಮಾಜದ ಹಿರಿಯ ಮುಖಂಡ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲೇ ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶವನ್ನು ಸಂಘಟಿಸಲು ತೀರ್ಮಾನಿಸಿದ್ದೇವೆ. ಮೇ 15ರ ಒಳಗಾಗಿಯೇ ಇಲ್ಲಿ ಸಮಾವೇಶವನ್ನು ಮಾಡಲಿದ್ದೇವೆ. ಜಾತಿ ಜನಗಣತಿ, ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಪ್ರದೇಶಕ್ಕೆ ಸಮಾವೇಶ ಆಗಲಿದೆ ಎಂದು ತಿಳಿಸಿದರು.

ಮಹಾಸಂಗಮ ಸಮಾವೇಶದ ಪೂರ್ವಭಾವಿಯಾಗಿ ಈಗಾಗಲೇ ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು, ಗ್ರಾಮಾಂತರ, ಚಿಕ್ಕಬುಳ್ಳಾಪುರ, ಕೋಲಾರ, ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕೊಪ್ಪಳ, ಬಳ್ಳಾರಿ, ಹೊಸಪೇಟೆಯಲ್ಲಿ ಸಭೆ ಮಾಡಿದ್ದೇವೆ. ಬೀದರ್‌, ರಾಯಚೂರು, ಯಾದಗಿರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಭಾಗದಲ್ಲೂ ಸಭೆ ಮಾಡಲಿದ್ದೇವೆ. ಕಾರವಾರ-ಮಂಗಳೂರಲ್ಲಿ ಸಮಾಜ ಬಾಂಧವರ ಸಂಖ್ಯೆ ಕಡಿಮೆ ಇದ್ದು, ಅಂತಹವರನ್ನೂ ಸಂಪರ್ಕಿಸುತ್ತೇವೆ ಎಂದು ಹೇಳಿದರು.

ನಾಡಿನ ಉದ್ದಗಲಕ್ಕೂ ಸಮಾಜ ಬಾಂಧವರು, ಮುಖಂಡರು, ಮಠಾಧೀಶರು, ನೌಕರರು, ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳು ಸಮಾಜವು ಒಂದಾಗಬೇಕೆಂದು ಹೇಳುತ್ತಿದ್ದು, ನಮ್ಮ ಸಮಾಜದ ಭ‍ವಿಷ್ಯಕ್ಕಾಗಿ ಸಂಘಟಿತ ಶಕ್ತಿಯಾಗಬೇಕಿದೆ. ಸಮಾಜವನ್ನು ಛಿದ್ರಗೊಳಿಸಲು ಕೆಲವು ದುಷ್ಟಶಕ್ತಿಗಳು ನಿರಂತರ ಪ್ರಯತ್ನಿಸುತ್ತಲೇ ಇವೆ. ನಮ್ಮ ಸಮುದಾಯ 9 ಮುಖ್ಯಮಂತ್ರಿಗಳನ್ನು ನೀಡಿದೆ. ಎಸ್.ನಿಜಲಿಂಗಪ್ಪ, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ, ಜೆ.ಎಚ್‌.ಪಟೇಲ್‌, ಬಿ.ಎಸ್.ಯಡಿಯೂರಪ್ಪ ಹೀಗೆ ನಮ್ಮ ಸಮಾಜದಿಂದ ಮುಖ್ಯಮಂತ್ರಿ ಆದವರಿಗೆ ಎಲ್ಲಾ ರೀತಿಯನ್ನು ತೊಂದರೆ ಕೊಟ್ಟ ನಿದರ್ಶನಗಳಿವೆ ಎಂದು ವಿವರಿಸಿದರು.

ಯಡಿಯೂರಪ್ಪನವರಿಗೆ 2011ರಲ್ಲಿ, 2021ರಲ್ಲೂ ತೊಂದರೆ ಕೊಟ್ಟರು. ಕಡೆಗೆ ಬಿಎಸ್‌ವೈಗೆ ಷಡ್ಯಂತ್ರ ಮಾಡಿ, ಅಧಿಕಾರದಿಂದಲೂ ಕೆಳಗಿಳಿಸಿದರು. ಈ ಹಿನ್ನೆಲೆಯಲ್ಲಿ ನಾವೊಂದು ನಿಶ್ಚಯ ಮಾಡಿದ್ದೇವೆ. ಯಾವುದೇ ದುಷ್ಟಶಕ್ತಿಗಳ ವಿರುದ್ಧ ನಾವು ಸುಮ್ಮನೇ ಕೂಡದೆ, ಇಡೀ ಸಮಾಜಗದ ಒಂದಾಗಿ ನಿಲ್ಲಬೇಕು. ಇದಕ್ಕಾಗಿ ದಾವಣಗೆರೆಯಲ್ಲಿ ಸಮಾಜದ ಮಹಾ ಸಮಾವೇಶವನ್ನು ಸಮಾಜದ ಹಿರಿಯರು, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯ ಕುಮಾರ, ಚಂದ್ರಶೇಖರ ಪೂಜಾರ, ಕೆ.ಎಂ.ಸುರೇಶ, ಎಲ್.ಎನ್.ಕಲ್ಲೇಶ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಧನಂಜಯ ಕಡ್ಲೇಬಾಳು, ಎಚ್.ಪಿ.ವಿಶ್ವಾಸ, ಕೊಟ್ರೇಶ ಗೌಡ, ಕಿಚುಡಿ ಕೊಟ್ರೇಶ ಇತರರು ಇದ್ದರು.