ಹಾಸನದಲ್ಲಿ ಒಡೆಯರ್‌ ಸ್ಮಾರಕ, ಮ್ಯೂಸಿಯಂಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

| Published : Mar 04 2024, 01:18 AM IST

ಹಾಸನದಲ್ಲಿ ಒಡೆಯರ್‌ ಸ್ಮಾರಕ, ಮ್ಯೂಸಿಯಂಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮಾರಕ, ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಕಾಮಗಾರಿಗಳ ಉದ್ಘಾಟನೆ । ಸಂಶೋಧನಾ ಕೇಂದ್ರಕ್ಕೂ ಅಡಿಗಲ್ಲು । ಒಡೆಯರ್‌, ಅಂಬೇಡ್ಕರ್‌ಗೆ ಪುಷ್ಪನಮನ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಬಾಲಮಂದಿರದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮಾರಕ, ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ನಗರದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ, ಫಲಾನುಭವಿಗಳ ಸಮಾವೇಶ ಹಾಗೂ ಸವಲತ್ತು ವಿತರಿಸಿದ ಬಳಿಕ ಬಾಲಮಂದಿರ ಆವರಣಕ್ಕೆ ಆಗಮಿಸಿದ ಮುಖ್ಯಮಂತ್ರಿ, ನಾಲ್ವಡಿ ಕೃಷ್ಣರಾಜ್ ಒಡೆಯರ್, ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಒಂದು ಚಿಟಿಕೆ ಮರಳು ನೀಡುವ ಮೂಲಕ ಉದ್ಘಾಟನೆ ಮಾಡಿದರು.

‘ಒಂದು ಶತಮಾನದ ಹಿಂದೆ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಸ್ಪೃಶ್ಯ ಜಾತಿಗಳ ಶಿಕ್ಷಣಕ್ಕಾಗಿ ಉಚಿತ ವಸತಿ ಶಾಲೆ, ಆದಿ ಕರ್ನಾಟಕ ಬೋರ್ಡಿಂಗ್ ಹೋಂ ಸ್ಥಾಪಿಸಿದ್ದರು. ಅದು ಇಂದಿಗೂ ಇರುವುದು ನಮ್ಮೆಲ್ಲರ ಸೌಭಾಗ್ಯ. ಮತ್ತೊಂದು ವಿಶೇಷ ಸಂಗತಿ ಎಂದರೆ ೧೯೫೪ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿ ಭಾಷಣ ಮಾಡಿ ಹೋಗಿದ್ದರು. ಇಂಥ ವಿಶೇಷ ಹಾಗೂ ಅತಿ ಮಹತ್ವದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನಡೆದಿರುವುದು ಅನೇಕರಿಗೆ ಸಂತಸ ತರಿಸಿದೆ. ಸದರಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕಕ್ಕೆ ಹಾಸನ ಜಿಲ್ಲೆಯ ಪ್ರತಿಯೊಬ್ಬರೂ ತಲಾ ಒಂದು ಚಿಟಿಕೆ ಶುಭ್ರ ಮರಳನ್ನು ಕಾಣಿಕೆಯಾಗಿ ತಂದು ಆ ಸ್ಥಳದಲ್ಲಿ ಅರ್ಪಿಸಲು ಶ್ರೀಧರ್ ಕಲಿವೀರ್ ಮನವಿ ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ, ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಹೋರಾಟ ಸಮಿತಿಯ ಆಗ್ರಹಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಮನ್ನಣೆ ನೀಡಿರುವುದಕ್ಕೆ ಶ್ರೀಧರ್‌ ಧನ್ಯವಾದ ಹೇಳಿದರು.

ಸದರಿ ಸ್ಮಾರಕ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಒಂದು ಕೋಟಿ ರು. ಮೀಸಲಿಟ್ಟಿದೆ. ಅದು ಸೇರಿ ಮೂರು ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ. ಆದರೆ ಸುಮಾರು ೨೦ ಕೋಟಿ ರು. ಮೀಸಲಿಡಬೇಕು ಎಂಬುದಾಗಿದೆ ಎಂಬ ಬೇಡಿಕೆ ಇಡಲಾಗಿದೆ. ಅದಕ್ಕೆ ಈಗಿನ ಸರ್ಕಾರ ಹಾಗೂ ಎಲ್ಲಾ ಜನಪ್ರತಿನಿಧಿಗಳು ಮನ್ನಣೆ ನೀಡಬೇಕು ಎಂದು ವಿನಂತಿ ಮಾಡಿದರು.

ಶಂಕುಸ್ಥಾಪನೆಗೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಸಂವಿಧಾನ ಜಾಗೃತಿ ಜಾಥಾವು ಕಾರ್ಯಕ್ರಮ ಸ್ಥಳಕ್ಕೆ ಸಾಗಿದ ನಂತರ ಸಮಾರೋಪ ನಡೆಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅಂಬೇಡ್ಕರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿಮಾನಿಗಳು, ಅನುಯಾಯಿಗಳು ಒಂದು ಚಿಟಿಕೆ ಮರಳು ತರುವ ಮೂಲಕ ಸಮಾರಂಭಕ್ಕೆ ಸಾಕ್ಷಿಯಾದರು.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಆದಿ ಕರ್ನಾಟಕ ಬೋರ್ಡಿಂಗ್ ಹೋಂ ಹೆಂಚಿನ ಮನೆ ಮತ್ತು ಖಾಲಿ ನಿವೇಶನವನ್ನು ತಾತ್ಕಾಲಿಕವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸರ್ಟಿಫೈಡ್ ಶಾಲೆಗೆ (ಬಾಲ ಮಂದಿರ) ನೀಡಲಾಗಿದ್ದು, ಅದನ್ನು ಸರ್ಕಾರದ ಆದೇಶದ ಪ್ರಕಾರ ಬೇರೆ ಸುಸಜ್ಜಿತ ಸರ್ಕಾರಿ ಕಟ್ಟಡಕ್ಕೆ 2023ರಲ್ಲಿ ವರ್ಗಾಯಿಸಲಾಗಿದೆ ಎಂದು ಶ್ರೀಧರ್‌ ಹೇಳಿದರು.

ಹಾಸನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.