ಸಿಎಂ ಸಿದ್ದರಾಮಯ್ಯ ಬಜೆಟ್‌ ಮೇಲಿನ ನಿರೀಕ್ಷೆ ಹುಸಿ

| Published : Mar 07 2025, 11:46 PM IST

ಸಾರಾಂಶ

ಕೃಷಿ ಆಧರಿತ ಕೈಗಾರಿಕೆ, ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗುವಂತಹ ಯೋಜನೆ, ನೀರಾವರಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿಲ್ಲ. ಬಜೆಟ್‌ ಬಗ್ಗೆ ಇಟ್ಟುಕೊಂಡಿದ್ದ ಭಾರಿ ನಿರೀಕ್ಷೆ ಇದರಿಂದ ಹುಸಿಯಾಗಿದೆ.

ನಾರಾಯಣ ಹೆಗಡೆ

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ ಬಗ್ಗೆ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ. ವರದಾ- ಬೇಡ್ತಿ ನದಿ ಜೋಡಣೆ, ಹಾವೇರಿ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಅನುದಾನ, ನೀರಾವರಿ ಯೋಜನೆಗಳ ಅನುಷ್ಠಾನ, ಕೃಷಿ ಆಧರಿತ ಕೈಗಾರಿಕೆ ಸೇರಿದಂತೆ ಯಾವ ಪ್ರಮುಖ ಬೇಡಿಕೆಗಳ ಬಗ್ಗೆಯೂ ಮುಂಗಡಪತ್ರದಲ್ಲಿ ಪ್ರಸ್ತಾಪ ಆಗದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರೇ ಇರುವುದರಿಂದ ಈ ಸಲ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ ತಮ್ಮ ಕ್ಷೇತ್ರಗಳಿಗೆ ಹೊಸ ಯೋಜನೆ, ಅನುದಾನ ತರುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹ ಯಾವುದೇ ಪ್ರಮುಖ ಯೋಜನೆಗಳು ಘೋಷಣೆಯಾಗಿಲ್ಲ. ಕೃಷಿ ಆಧರಿತ ಕೈಗಾರಿಕೆ, ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗುವಂತಹ ಯೋಜನೆ, ನೀರಾವರಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿಲ್ಲ. ಬಜೆಟ್‌ ಬಗ್ಗೆ ಇಟ್ಟುಕೊಂಡಿದ್ದ ಭಾರಿ ನಿರೀಕ್ಷೆ ಇದರಿಂದ ಹುಸಿಯಾಗಿದೆ.

ಜಿಲ್ಲೆಗೆ ಸಿಕ್ಕಿದ್ದೇನು?: ಕಾಗಿನೆಲೆ‌ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳಿಗೆ ₹34 ಕೋಟಿ ಅನುದಾನ ಒದಗಿಸಲಾಗಿದೆ. ಬ್ಯಾಡಗಿ ಮೆಣಸಿನಕಾಯಿ ತಳಿ ಸಂರಕ್ಷಣೆ ಮತ್ತು ಎಲೆ ಮುಟುರು ರೋಗ, ತ್ರಿಪ್ಸ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಸವಣೂರು ತಾಲೂಕು ಆಸ್ಪತ್ರೆ ನವೀಕರಣಗೊಳಿಸುವುದು. ಸವಣೂರು ಸೇರಿದಂತೆ ವಿವಿಧ ಆಸ್ಪತ್ರೆಗಳ ನವೀಕರಣಕ್ಕೆ ₹650 ಕೋಟಿ ಅನುದಾನ ನೀಡಲಾಗಿದೆ. ಆದರೆ, ಇದರಲ್ಲಿ ಸವಣೂರು ಆಸ್ಪತ್ರೆಗೆ ಎಷ್ಟು ಅನುದಾನ ಸಿಗುತ್ತದೆ ಎಂಬುದು ತಿಳಿಯಬೇಕಿದೆ.

ಉದ್ಯೋಗ ಸೃಜನೆಯೊಂದಿಗೆ ಆರ್ಥಿಕ ಪ್ರಗತಿ ಸಾಧಿಸಲು ರಾಣಿಬೆನ್ನೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಹಿರೇಕೆರೂರಿನ ಸರ್ವಜ್ಞ ಕೆರೆ ಹಾಗೂ ಹಾನಗಲ್ಲ ತಾಲೂಕಿನ ಹಿರೇಕೌಂಶಿ ಕೆರೆ ತುಂಬಿಸುವ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ವಾಹನ ಸಂಚಾರ ಮೇಲ್ವಿಚಾರಣೆ ಮಾಡಲು ಹಾಗೂ ಸಂಚಾರ ನಿಯಮ‌ ಉಲ್ಲಂಘನೆ ಪ್ರಕರಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ ₹50 ಕೋಟಿ ವೆಚ್ಚದಲ್ಲಿ ಎಐ ಆಧರಿತ ವಿದ್ಯುನ್ಮಾನ ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ವಹಿಸಲಾಗಿದೆ.

ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹಾವೇರಿ ಸೇರಿ ಪ್ರತಿ ಜಿಲ್ಲೆಗೆ ಒಂದರಂತೆ ವಸತಿ ಶಾಲೆಗಳನ್ನು ಪಿಯು ಕಾಲೇಜುಗಳಾಗಿ ಉನ್ನತಿಕರಿಸುವುದು, ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಎರಡು ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಹೀಗೆ ಹಲವು ಜಿಲ್ಲೆಗಳೊಂದಿಗೆ ಹಾವೇರಿಗೂ ಕೆಲ ಯೋಜನೆಗಳನ್ನು ಪ್ರಸ್ತಾಪಿಸಿದ್ದು ಬಿಟ್ಟರೆ ಜನರ ಬೇಡಿಕೆಗಳಿಗೆ ಆದ್ಯತೆ ಸಿಕ್ಕಿಲ್ಲ.

ಬೇಡಿಕೆ ಏನಿತ್ತು?: ಜಿಲ್ಲೆಯ ರೈತರ ಬೇಡಿಕೆಯಾದ ವರದಾ- ಬೇಡ್ತಿ ನದಿ ಜೋಡಣೆ ಬಗ್ಗೆಯೂ ಚಕಾರ ಎತ್ತಿಲ್ಲ. ಮುಚ್ಚುವ ಭೀತಿ ಎದುರಾಗಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಮೀಸಲಿಟ್ಟಿಲ್ಲ. ರಾಜ್ಯ ಸರ್ಕಾರದ ಈ ನಡೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದಲ್ಲದೇ ತುಂಗಭದ್ರಾ ನದಿಗೆ ಹಾವನೂರು- ಶಾಖಾರ ಮಧ್ಯೆ ಬ್ರಿಡ್ಜ್‌ ಕಂ ಬ್ಯಾರೇಜ್‌, ನೀರಾವರಿ ಯೋಜನೆಗಳಿಗೆ ಅನುದಾನ, ಎಂಜಿನಿಯರಿಂಗ್‌ ಕಾಲೇಜಿನ ಪುನಶ್ವೇತನ, ಹಾವೇರಿ ನಗರಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಅನುದಾನ, ವರದಾ ನದಿ ಬ್ರಿಡ್ಜ್‌ಗಳ ನವೀಕರಣ ಸೇರಿದಂತೆ ಹಲವಾರು ನಿರೀಕ್ಷೆಗಳು ಹುಸಿಯಾಗಿವೆ. ಶಿಶುವಿನಹಾಳದ ಶರೀಫಗಿರಿ, ರಾಣಿಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರದ ನವಿಲುಧಾಮ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಸ್ಥಳಗಳಲ್ಲಿ ಹೆಚ್ಚಿನ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂಬ ಬೇಡಿಕೆಯಿತ್ತು. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿತ್ತು.

ಇದಲ್ಲದೇ ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವತ್ತ ಆದ್ಯತೆ ನೀಡಬೇಕು ಎಂಬುದು ಜನರ ಒತ್ತಾಯವಾಗಿತ್ತು. ಜಿಲ್ಲಾ ಕೇಂದ್ರವಾಗಿ ಎರಡೂವರೆ ದಶಕ ಕಳೆದಿದ್ದರೂ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹುಬ್ಬಳ್ಳಿ, ದಾವಣಗೆರೆಗೆ ಕರೆದುಕೊಂಡು ಹೋಗುವ ಸ್ಥಿತಿಯಿದ್ದು, ಹೈಟೆಕ್ ಆಸ್ಪತ್ರೆಗೆ ಬೇಡಿಕೆಯಿತ್ತು. ಆದರೆ, ಈ ಯಾವ ಬೇಡಿಕೆಗಳ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಾಗದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಹಾವೇರಿ ನಗರಕ್ಕೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಕಂಚಾರಗಟ್ಟಿ ಬಳಿಯಲ್ಲಿರುವ ಕುಡಿಯುವ ನೀರಿನ ಜಾಕವೆಲ್ ಬಳಿಯಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಸಿಗುವ ವಿಶ್ವಾಸವನ್ನು ಶಾಸಕರೇ ವ್ಯಕ್ತಪಡಿಸಿದ್ದರು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿತ್ತು.

ರಾಜಕೀಯವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯ ಜನತೆ ಶಕ್ತಿ ನೀಡಿದ್ದು, ಕಳೆದ ಶಿಗ್ಗಾಂವಿ ಉಪಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಸದ್ಯ ಜಿಲ್ಲೆಯ ಎಲ್ಲ 6 ಕ್ಷೇತ್ರಗಳಲ್ಲಿ ಕೈ ಶಾಸಕರಿದ್ದು, ಅವರ ಪ್ರಯತ್ನದ ಫಲವಾಗಿ ಜಿಲ್ಲೆಯ ಜನರ ಬೇಡಿಕೆಗಳನ್ನು ಬಜೆಟ್‌ನಲ್ಲಿ ಸೇರಿಸುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಬಹುತೇಕ ಪ್ರಮುಖ ಬೇಡಿಕೆಗಳಿಗೆ ಹಾಗೆಯೇ ಉಳಿದಂತಾಗಿದೆ.