ಸಾರಾಂಶ
ತಿಪ್ಪೇಸ್ವಾಮಿ ಅವರು, ಬಾಗಿಲಿನಲ್ಲಿರುವ ಸಿದ್ದರಾಮಯ್ಯ ಚಿತ್ರಕ್ಕೆ ಹೂವಿನಹಾರ ಹಾಕಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.
ಕೂಡ್ಲಿಗಿ: ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದ ಗೃಹಲಕ್ಷ್ಮಿ ಹಣದಲ್ಲಿ ಮನೆಯ ಬಾಗಿಲು ಮಾಡಿಸಿ ಅದರಲ್ಲಿ ಸಿಎಂ ಸಿದ್ದರಾಮಯ್ಯ ನಿಂತಿರುವ ಚಿತ್ರ ಹಾಗೂ ಹೆಸರು ಗೃಹಲಕ್ಷ್ಮಿ ಯೋಜನೆ ಎಂದು ಕೆತ್ತಿಸಿದ್ದ ತಾಲೂಕಿನ ಹೊಸಹಳ್ಳಿಯ ಅಭಿಮಾನಿ ದಂಪತಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂಗೆ ತೋರಿಸಲು ಪ್ರದರ್ಶನದಲ್ಲಿ ಇಡಲಾಗಿತ್ತು. ಇದನ್ನು ನೋಡಿ ಸಿಎಂ ಸಿದ್ದರಾಮಯ್ಯ ಪುಳಕಿತಗೊಂಡರು.
ಕೂಡ್ಲಿಗಿ ತಾಲೂಕು ಹೊಸಹಳ್ಳಿ ಸಮೀಪದ ಕೆಂಚಮಲ್ಲನಹಳ್ಳಿ ಗ್ರಾಮದ ಪಾರ್ವತಮ್ಮ ಕೆ.ಎಂ. ತಿಪ್ಪೇಸ್ವಾಮಿ ಅವರೇ ಗೃಹಲಕ್ಷ್ಮಿ ಹಣದಿಂದ ಹಳೆಯ ಮನೆಗೆ ಹೊಸ ಬಾಗಿಲು ಮಾಡಿಸಿದ್ದು, ಈ ಬಗ್ಗೆ ಕನ್ನಡಪ್ರಭದಲ್ಲಿ ಮೊದಲು ವರದಿ ಮಾಡಲಾಗಿತ್ತು. ರಾಜ್ಯಾದ್ಯಂತ ಈ ಬಗ್ಗೆ ಚರ್ಚೆಯಾಗಿತ್ತು. ಅದರ ಬೆನ್ನಲ್ಲೇ ಮಂಗಳವಾರ ತಮ್ಮ ಹಳೆಯ ಮನೆಗೆ ಹೊಸ ಬಾಗಿಲು ಮಾಡಿಸಿದ ಕೆ.ಎಂ. ತಿಪ್ಪೇಸ್ವಾಮಿ ಅವರು, ಬಾಗಿಲಿನಲ್ಲಿರುವ ಸಿದ್ದರಾಮಯ್ಯ ಚಿತ್ರಕ್ಕೆ ಹೂವಿನಹಾರ ಹಾಕಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ. ಈಗ ಮುಂದುವರಿದು ಕೂಡ್ಲಿಗಿಗೆ ಸಿಎಂ ಬರುವ ಹಿನ್ನೆಲೆಯಲ್ಲಿ ಕೂಡ್ಲಿಗಿಗೆ ಆ ಬಾಗಿಲು ತಂದು ಪ್ರದರ್ಶನಕ್ಕಿಟ್ಟಿದ್ದರು.2017ರಲ್ಲಿ ಕಟ್ಟಿಸಿದ ನಮ್ಮ ಮನೆಯ ಬಾಗಿಲು ಶಿಥಿಲವಾಗಿತ್ತು. ಅದಕ್ಕೆ ನನಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಹೊಸ ಬಾಗಿಲು ಮಾಡಿಸಿದೆ. ಇದಕ್ಕೆ ₹28 ಸಾವಿರ ಖರ್ಚಾಗಿದ್ದು, ನಮ್ಮೂರಿನ ಎಕ್ಕೆಗೊಂದಿ ದುರುಗೇಶ್ ಈ ಬಾಗಿಲು ನಿರ್ಮಿಸಿದ್ದಾರೆ. ದುರೇಗೇಶ್ ಸಿಎಂ ಸಿದ್ದರಾಮಯ್ಯ ಭಾವಚಿತ್ರ ಕೆತ್ತಲು ಸಾಕಷ್ಟು ಶ್ರಮಪಟ್ಟಿದ್ದಾರೆ ಎನ್ನುತ್ತಾರೆ ಕೆಂಚಮಲ್ಲನಹಳ್ಳಿಯ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಕೆ.ಎಂ. ಪಾರ್ವತಮ್ಮ- ತಿಪ್ಪೇಸ್ವಾಮಿ.
;Resize=(128,128))