ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಶಾಂತಕುಮಾರ್ ಮೆಮೋರಿಯಲ್ ಹಾಲ್‌ನ ಆವರಣದಲ್ಲಿ ಅಂತಿಮ ಸಂಸ್ಕಾರದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪರಿಶೀಲಿಸಿದರು. ಜಿಪಂ ಸಿಇಒ ಡಾ.ಆಕಾಶ್, ಎಎಸ್‌ಪಿ ಡಾ.ಶಿವಕುಮಾರ್ ದಂಡಿನ ಇದ್ದರು.

 ಚಳ್ಳಕೆರೆ : ಭಾನುವಾರ ಮುಂಜಾನೆ ನಿಧನಹೊಂದಿದ ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರ ಸಂಜೆ ಚಳ್ಳಕೆರೆ ನಿವಾಸಕ್ಕೆ ತರಲಾಗಿದ್ದು ಸೋಮವಾರ ಏಪ್ರಿಲ್ 11ರಂದು ಸುಧಾಕರ್ ಅಂತ್ಯ ಸಂಸ್ಕಾರ ನೆರವೇರಲಿದೆ.

ಡಿ.ಸುಧಾಕರ್ ಮೈದಾನದಲ್ಲಿ ಸಾರ್ವಜನಿಕ ದರ್ಶನ

ಮುಂಜಾನೆ 6 ರಿಂದ 12ರವರೆಗೆ ಚಳ್ಳಕೆರೆ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ನಂತರ, ಚಿತ್ರದುರ್ಗ ರಸ್ತೆಯ ವಿಠ್ಠಲ ನಗರದಲ್ಲಿ ಇರುವ ಶಾಂತಕುಮಾರ್ ಮೆಮೋರಿಯಲ್ ಶೆಟಲ್ ಕೋರ್ಟ್ ಆವರಣದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಈಗಾಗಲೇ ಈ ಸ್ಥಳದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್, ಸಿಇಒ ಡಾ.ಆಕಾಶ್, ಎಎಸ್‌ಪಿ ಡಾ.ಶಿವಕುಮಾರ್ ದಂಡಿನ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ರೇಹಾನಾ ಪಾಷಾ ಸೇರಿದಂತೆ ನಗರಸಭೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಇದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾಲ್ಗೊಳ್ಳಲಿದ್ದಾರೆ

ಸಚಿವ ಡಿ.ಸುಧಾಕರ್ ಅಂತ್ಯ ಸಂಸ್ಕಾರ ನಡೆಯುವ ಚಳ್ಳಕೆರೆಗೆ ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ರಣದೀಪ್ ‌ಸಿಂಗ್ ಸುರ್ಜೆವಾಲ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಶಾಸಕರು, ಮಂತ್ರಿಗಳು, ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ.

ಡಿ.ಸುಧಾಕರ್ ಪಾರ್ಥೀವ ಶರೀರದ ಅಂತಿಮ ವಿಧಿ ವಿಧಾನಗಳು ಸ್ವಂತ ಮನೆ ಗೊಮ್ಮಟ ನಿಲಯದಲ್ಲಿ ಮುಂಜಾನೆಯಿಂದ ನಡೆಯಲಿದೆ. ಇದಾದ ನಂತರ ಸಾರ್ವಜನಿಕ ದರ್ಶನ ಆದ ಮೇಲೆ ಜೈನ್ ಧರ್ಮದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.