ವೀರಶೈವ- ಲಿಂಗಾಯತ ಮುಖಂಡರಿಗೆ ಭಾವನಾತ್ಮಕ ದಾಳ ಹಾಕಿದ ವಿಜಯೇಂದ್ರ

| Published : Apr 22 2024, 02:07 AM IST

ವೀರಶೈವ- ಲಿಂಗಾಯತ ಮುಖಂಡರಿಗೆ ಭಾವನಾತ್ಮಕ ದಾಳ ಹಾಕಿದ ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕೈದು ದಶಕಗಳಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ತೋರಿದ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ನನ್ನ ಮೇಲೂ ಇಡಬೇಕು. ಇದನ್ನು ಉಳಿಸಿಕೊಂಡು ನಿಮ್ಮ ನಂಬಿಕೆಗೆ ಧಕ್ಕೆ ಬರದಂತೆ ಕೆಲಸ ಮಾಡುತ್ತೇನೆ. ಈ ಜಿಲ್ಲೆಗಳಲ್ಲಿ ತಲೆ ತಗ್ಗಿಸುವಂತೆ ಮಾಡದೆ ಕೈ ಹಿಡಿಯಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ತೀವ್ರ ಪ್ರತಿಷ್ಠೆಯ ಕಣವಾದ ಮೈಸೂರು- ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವೀರಶೈವ- ಲಿಂಗಾಯತ ಮುಖಂಡರಿಗೆ ಭಾವನಾತ್ಮಕ ದಾಳ ಹಾಕಿದರು.

ನಗರದ ಶ್ರೀಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆದ ವೀರಶೈವ- ಲಿಂಗಾಯತ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ತಲೆ ತಗ್ಗಿಸುವ ಕೆಲಸ ಮಾಡಲು ಅವಕಾಶ ಕೊಡಬೇಡಿ ಎಂದು ಭಾವನಾತ್ಮಕ ಮಾತುಗಳಿಂದ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

ಕಳೆದ ನಾಲ್ಕೈದು ದಶಕಗಳಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ತೋರಿದ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ನನ್ನ ಮೇಲೂ ಇಡಬೇಕು. ಇದನ್ನು ಉಳಿಸಿಕೊಂಡು ನಿಮ್ಮ ನಂಬಿಕೆಗೆ ಧಕ್ಕೆ ಬರದಂತೆ ಕೆಲಸ ಮಾಡುತ್ತೇನೆ. ಈ ಜಿಲ್ಲೆಗಳಲ್ಲಿ ತಲೆ ತಗ್ಗಿಸುವಂತೆ ಮಾಡದೆ ಕೈ ಹಿಡಿಯಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಾವು ಕವಲು ದಾರಿಯಲ್ಲಿದ್ದೇವೆ. ನಾಡು ಮತ್ತು ಸಮಾಜದಲ್ಲಿ ಬದಲಾವಣೆ ಆಗಬೇಕಿದೆ. ಬೇರೆ ಸಮಾಜಕ್ಕೆ ನೆರಳು ಕೊಟ್ಟಿದ್ದ ದೊಡ್ಡ ಸಮಾಜ ಇಂದು ದುಃಖದಲ್ಲಿ ಇರಬೇಕಿರುವ ಕಾರಣ ಈಗಲಾದರೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಅವರು ಹೇಳಿದರು.

ಶಿಥಿಲಾವಸ್ಥೆಯಲ್ಲಿರುವ ಸಮಾಜವನ್ನು ಸರಿಪಡಿಸಿ ಗಟ್ಟಿ ಮಾಡಬೇಕಿದೆ. ನಮ್ಮನ್ನು ನಾವು ಎಚ್ಚರಿಕೆಯಾಗಿ ಜಾಗೃತರಾಗಬೇಕು ಎಂದರು.

ಯಡಿಯೂರಪ್ಪ ಅವರಂತೆ ನಂಬಿಕೆ ಮತ್ತು ವಿಶ್ವಾಸವನ್ನು ಉಳಸಿಕೊಂಡು ಬಂದಿದ್ದೇನೆ. ರಾಜಕಾರಣ ಪ್ರವೇಶ ಮಾಡುತ್ತೇನೆಂದು ಕನಸು-ಮನಸ್ಸಿನಲ್ಲೂ ಯೋಚನೆ ಮಾಡಿರಲಿಲ್ಲ. ಆದರೆ 2018ರಲ್ಲಿ ವರುಣ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶ ಮಾಡಲು ಕಾರಣವಾಯಿತು. ವರುಣ ದಿಂದಲೇ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಬೆಳೆಯಲು ಕಾರಣವಾಯಿತು. ಹಾಗಾಗಿಯೇ, ಈ ಜಿಲ್ಲೆಗಳನ್ನು ಎಂದಿಗೂ ಮರೆಯಲ್ಲ ಎಂದು ಅವರು ಹೇಳಿದರು.

ಸುಮಾರು ವರ್ಷಗಳಿಂದಲೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರ ಬಗ್ಗೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಿರೀಕ್ಷೆಯನ್ನು ಇಟ್ಟುಕೊಂಡಂತೆ ನನ್ನ ಮೇಲೂ ತೋರಬೇಕು. ನಮ್ಮನ್ನು ಕೈ ಹಿಡಿದು ಮುನ್ನೆಡೆಸಬೇಕು. ಸಿಎಂ ಆಗಿದ್ದಾಗ ಬಿಜೆಪಿ ಶಾಸಕರು ಇಲ್ಲದಿದ್ದರೂ ಎರಡು ಜಿಲ್ಲೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ವಾಡಿದ್ದೇವೆ ಎನ್ನುವುದನ್ನು ಗಮನಿಸಬೇಕು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖಂಡರಾದ ಶಿವಮೂರ್ತಿ ಚಿಕ್ಕಕಾನ್ಯ, ಮಾರ್ಬಳ್ಳಿ ಮೂರ್ತಿ, ಸುನಂದ ಪಾಲನೇತ್ರ, ಚಂದ್ರಶೇಖರ್, ಬ್ಯಾತಹಳ್ಳಿ ನಾಗರಾಜು, ತೋಂಟದಾರ್ಯ, ಯು.ಎಸ್. ಶೇಖರ್, ಹೆಳವರಹುಂಡಿ ಸಿದ್ದಪ್ಪ, ಎಸ್.ಸಿ. ಅಶೋಕ್, ಕಾ.ಪು. ಸಿದ್ದವೀರಪ್ಪ, ಮುಗೂರು ನಂಜುಂಡಸ್ವಾಮಿ, ಬಿ.ವಿ. ಮಂಜುನಾಥ್, ಗಿರೀಶ್, ರೇಣುಕಾರಾಜ್, ಬಿ. ನಿರಂಜನಮೂರ್ತಿ, ಜಗದೀಶ್, ಪುಟ್ಟರಾಜು ಮೊದಲಾದವರು ಇದ್ದರು.