ಸಾರಾಂಶ
ಶಾಸಕರು ಸಹ ಶಿವಕುಮಾರ ಅವರಿಂದ ಅಂತರ ಕಾಯ್ದುಕೊಂಡರು.
ಕೂಡ್ಲಿಗಿ: ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ಆಗಮಿಸಿದ್ದು ಗಮನ ಸೆಳೆಯಿತು.
ಮೊದಲು ವೇದಿಕೆಗೆ ಆಗಮಿಸಿ ಜನರತ್ತ ಕೈ ಬೀಸುತ್ತಾ ಸಿಎಂ ಸಿದ್ದರಾಮಯ್ಯ ಬಂದರೆ, ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಜನರತ್ತ ಕೈಬೀಸಿ ಬಂದು ವೇದಿಕೆಯಲ್ಲಿ ಕುಳಿತರು. ನಂತರ ಡಿ.ಕೆ. ಶಿವಕುಮಾರ್ ಸಿಎಂ ಪಕ್ಕದಲ್ಲಿದ್ದರೂ ಏಕಾಂಗಿಯಾದರು. ಸಿಎಂ ಅಲ್ಲದೇ ವೇದಿಕೆಯಲ್ಲಿದ್ದ ಸಚಿವರು, ಶಾಸಕರು ಸಹ ಶಿವಕುಮಾರ ಅವರಿಂದ ಅಂತರ ಕಾಯ್ದುಕೊಂಡರು.ಡಿ.ಕೆ. ಶಿವಕುಮಾರ್ ಪಕ್ಕ ಖಾಲಿ ಖುರ್ಚಿಗಳಿದ್ದರೂ ಡಿ.ಕೆ. ಶಿವಕುಮಾರ್ ಪಕ್ಕಕ್ಕೆ ಸಚಿವರಾದ ಜಮೀರ್ ಅಹಮದ್ ಖಾನ್, ಎಂ.ಸಿ. ಸುಧಾಕರ್, ಸಂಸದ ತುಕಾರಾಂ ಸೇರಿ ಜಿಲ್ಲೆಯ ಶಾಸಕರು ಕುಳಿತುಕೊಳ್ಳುವ ಮನಸ್ಸು ಮಾಡಲಿಲ್ಲ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಏಕಾಂಗಿಯಾಗಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಮಾಡಿದರು. ಏಕಾಂಗಿಯಾಗಿಯೇ ಸ್ನ್ಯಾಕ್ಸ್ ತಿನ್ನುತ್ತಾ, ಟೀ ಕುಡಿಯುತ್ತಾ ಕಾಲ ಕಳೆದರು.
ಕೆಲ ಸಮಯದ ಬಳಿಕ ಡಿ.ಕೆ. ಶಿವಕುಮಾರ್ ಪಕ್ಕಕ್ಕೆ ಬಂದು ಕುಳಿತ ಸಂಸದ ತುಕಾರಾಂ, ಡಿ.ಕೆ. ಶಿವಕುಮಾರ್ ಜತೆಗೆ ಮಾತನಾಡಿದರು. ಮುಖ್ಯಮಂತ್ರಿ ಮಾತನಾಡುವಾಗ ಜಮೀರ್ ಅಹಮದ್ ಡಿ.ಕೆ. ಶಿವಕುಮಾರ್ ಪಕ್ಕಕ್ಕೆ ಬಂದು ಕುಳಿತು ಗಂಭೀರವಾಗಿ ಮಾತನಾಡುತ್ತಾ ಕುಳಿತರು.ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಪಾದರಸದಂತೆಯೇ ವೇದಿಕೆಯಲ್ಲಿ ಅತ್ತಿಂದ ಇತ್ತ ಅಡ್ಡಾಡುತ್ತಾ ತಮ್ಮ ಪತ್ನಿ ಪುಷ್ಪಾ ಜತೆ ವೇದಿಕೆಯಲ್ಲಿದ್ದ ಗಣ್ಯರಿಗೆ ಸ್ವಾಗತ ಕೋರಿದರು.
ಬೃಹತ್ ವೇದಿಕೆಯಾಗಿದ್ದರಿಂದ ನಿಂತುಕೊಂಡೇ ಕೆರೆ ನೀರು ತುಂಬಿಸುವ ಕಾರ್ಯಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಚಾಲನೆ ನೀಡಿದರು. ಸಚಿವ ಸಂತೋಷ್ ಲಾಡ್ ಪಂಚೆ, ಅಂಗಿ ತೊಟ್ಟು ಗಮನ ಸೆಳೆದರು. ವೀರಾವೇಶದ ಭಾಷಣದ ಮೂಲಕ ಬಿಜೆಪಿಯನ್ನು ಎಂದಿನ ದಾಟಿಯಲ್ಲಿ ಹಣಿದರು.;Resize=(128,128))