ಸಾರಾಂಶ
ಗದಗ: ಜಾತಿ ಜಾತಿಗಳ ಮಧ್ಯೆ ಒಡೆದಾಳುವ ನೀತಿ ಅನುಸರಿಸಿ ಅದರಲ್ಲಿಯೂ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಹೀಗೆ ಪ್ರತಿಯೊಂದು ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅದರಲ್ಲಿಯೂ ಸಿಎಂ ಸಿದ್ದರಾಮಯ್ಯ ಇದರಲ್ಲಿ ನಿಸ್ಸೀಮರು ಎಂದು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಧರ್ಮಗಳ ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಿ ಪೊಲೀಸರ ಸರ್ಪಗಾವಲು ಹಾಕುವ ಮೂಲಕ ಹಬ್ಬಗಳನ್ನು ನೆಮ್ಮದಿಯಾಗಿ ಆಚರಿಸಲು ಬಿಡುತ್ತಿಲ್ಲ. ಗಣೇಶ ಮೂರ್ತಿಗೆ ಕಲ್ಲು ಎಸೆದ ಪ್ರಕರಣ ಸರ್ಕಾರದ ಆಡಳಿತದ ವೈಫಲ್ಯವಾಗಿದೆ. ಮುಸಲ್ಮಾನರು ಇಲ್ಲದ ಊರಲ್ಲಿ ಹಿಂದೂಗಳು ಮೊಹರಂ ಆಚರಿಸಿಕೊಂಡು ಬರುತ್ತಿದ್ದ ಸಂಸ್ಕೃತಿ ನಮ್ಮದು. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಮು ಸೌಹಾರ್ದತೆ ಹಾಳು ಮಾಡುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಅಲಂಕಾರ ಮಾಡಬೇಡಿ, ವಾದ್ಯ ಹಚ್ಚಬೇಡಿ, ಗಣೇಶನನ್ನು ಪ್ರತಿಷ್ಠಾಪಿಸಬೇಡಿ ಹೀಗೆ ನಮ್ಮ ಆಚರಣೆಗಳಿಗೂ ನಿರ್ಬಂಧ ಹೇರುವುದು ಎಷ್ಟು ಸರಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷಗಳಾದರೂ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ನೀರಾವರಿ, ರಸ್ತೆ ಕೆಲಸಗಳ ಅಭಿವೃದ್ಧಿ ಶೂನ್ಯವಾಗಿವೆ. ಬೆಲೆಗಳು ಗಗನಕ್ಕೆರಿವೆ. ಮದ್ಯ ಶೇ. 400ರಷ್ಟು ಹೆಚ್ಚಳ, ಮನೆ, ನೀರು ಟ್ಯಾಕ್ಸ್ ಹೆಚ್ಚಳ, ವಿದ್ಯುತ್ ದರ ಹೆಚ್ಚಳ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹಾಕುತ್ತಿದೆ. ಎರಡು ವರ್ಷದ ಬಜೆಟ್ ₹38 ಸಾವಿರ ಕೋಟಿ ಎಸ್ಸಿಪಿ-ಟಿಎಸ್ಸಿ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.ಈ ಹಿಂದೆ ಸಾಮಾಜಿಕ ಶೈಕ್ಷಣಿಕ ಒಳ ಮೀಸಲಾತಿ ಸಮರ್ಪಕ ನಡೆದಿಲ್ಲ. ಎಸ್ಸಿ ಶೇ.15, ಎಸ್ಸಿ ಶೇ.3ರಷ್ಟು ಮೀಸಲಾತಿ ಇತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿಗೆ ಶೇ.17, ಎಸ್ಟಿ ಶೇ. 7ರಷ್ಟು ಮೀಸಲು ಹೆಚ್ಚಿಸಿದ್ದರು. ಆದರೆ ಕಾಂಗ್ರೆಸ್ ಶಾಸಕರು ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳ ಮಾಡಿಲ್ಲ ಎಂದು ಸದನದಲ್ಲಿ ಚರ್ಚೆ ಮಾಡಿ ಸುಳ್ಳು ಹೇಳಿದ್ದರು. ಈಗ ಶೇ.17ರಷ್ಟು ಮೀಸಲಾತಿಯಲ್ಲಿ ಎಡ, ಬಲ, ತೃತೀಯ ಎಂದು ಕಾಂಗ್ರೆಸ್ ಹಂಚಿಕೆ ಮಾಡಿದೆ. ಹಾಗಿದ್ದರೆ ಶೇ.17ರಷ್ಟು ಮೀಸಲು ಎಲ್ಲಿಂದ ಬಂತು ಎನ್ನುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ಉತ್ತರಿಸಬೇಕು ಎಂದರು.
ಆದಿ ಆಂಧ್ರ ಜಾತಿಯನ್ನು ಮೂಲ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದ ಗೋವಿಂದ ಕಾರಜೋಳ, ಈಗಾಗಲೇ ವೈಜ್ಞಾನಿಕ ಜಾತಿಗಣತಿ ಆಗಿದೆ. ನಾಗಮೋಹನದಾಸ ಹಾಗೂ ಮಾಧುಸ್ವಾಮಿ ವರದಿ ವೈಜ್ಞಾನಿಕವಾಗಿದ್ದು, ಸಂಪೂರ್ಣ ವರದಿ ಜಾರಿಗೊಳಿಸಬೇಕಿತ್ತು. ಜಿ.ಪರಮೇಶ್ವರ, ಶಿವರಾಜ ತಂಗಡಗಿ, ಮಹಾದೇವಪ್ಪ ಅವರು ಯಾವ ಜನಾಂಗಕ್ಕೂ ಉಪಯೋಗವಾಗದಂತಹ ಒಳಮೀಸಲಾತಿ ಜಾರಿಗೆ ತಂದು ಅವರನ್ನು ಖುಷಿ ಪಡಿಸಿದ್ದಾರೆ. ಸರ್ಕಾರಕ್ಕೆ ಈಗಲೂ ತಿದ್ದುಪಡಿ ಮಾಡಲು ಅವಕಾಶವಿದೆ. ತಿದ್ದುಪಡಿಗೆ ಮುಂದಾಗದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಸೆ. 22 ರಿಂದ ಆರಂಭವಾಗುವ ಜಾತಿಗಣತಿಗೆ ನಮ್ಮ ಸಂರ್ಪೂಣ ವಿರೋಧವಿದೆ. ಮತ್ತೊಮ್ಮೆ ಗಣತಿ ಮಾಡುವುದು ಸರಿಯಲ್ಲ, ಈಗಾಗಲೇ ಮಾಡಿರುವ ಜಾತಿಗಣತಿಗಳೇ ವೈಜ್ಞಾನಿಕವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಲಿಂಗರಾಜ ಪಾಟೀಲ, ಮಂಜುನಾಥ ಮುಳಗುಂದ, ಉಷಾ ದಾಸರ, ಎಂ.ಎಂ. ಹಿರೇಮಠ, ಮಹೇಶ ದಾಸರ ಮುಂತಾದವರು ಹಾಜರಿದ್ದರು.