ಸಾರಾಂಶ
ಪ್ರಗತಿ ಪರಿಶೀಲನೆ ಸಭೆ । ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ । ಮಾದೇಶ್ವರ ಹುಲಿಯ ಮೇಲೆ ಕುಳಿತ ಪ್ರತಿಮೆ ವೀಕ್ಷಣೆ
ಕನ್ನಡಪ್ರಭ ವಾರ್ತೆ ಹನೂರುಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲು ಬರುತ್ತಿದ್ದಾರೆ. ಈ ಹಿನ್ನೆಲೆ ನಡೆಯುತ್ತಿರುವ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚಿಸಿದರು.
ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನಾಗಮಲೆ ಭವನದಲ್ಲಿ ನಡೆದಂತಹ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ ತಿಂಗಳಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವುದರಿಂದ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ 386 ಕೊಟ್ಟಡಿ ಕಾಮಗಾರಿ, ಮಲೆ ಮಹದೇಶ್ವರ 108 ಅಡಿ ಪ್ರತಿಮೆ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿ, ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಬಹು ನಿರೀಕ್ಷಿತ ಸೋಲಾರ್ ಪ್ಲಾಂಟ್ ಲೋಕಾರ್ಪಣೆಗೊಳಿಸಲು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲು ಮಲೆ ಮಾದೇಶ್ವರ ಬೆಟ್ಟದಲ್ಲಿ ಯುಜಿಡಿ ಕಾಮಗಾರಿ ಸೇರಿದಂತೆ ಶಾಲೂರು ಬೃಹನ್ಮಠದ ಸಮೀಪದಲ್ಲಿ ಬರುವ ವೇದ ಆಗಮ ಪಾಠಶಾಲೆಯ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅವರು ಬರುವ ಬಗ್ಗೆ ಸಭೆಯ ನಡೆಸಿ ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿಸಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ ಮಲೆ ಮಾದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡಿನಿಂದಲೂ ಸಹ ಲಕ್ಷಾಂತರ ಭಕ್ತರು ಬರುವುದರಿಂದ ಜಾತ್ರೆ ಹಾಗೂ ಹಬ್ಬ ಅಮಾವಾಸ್ಯೆ, ಹುಣ್ಣಿಮೆ ವಿಶೇಷ ದಿನಗಳಲ್ಲಿ ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳು ಬರುವುದರಿಂದ ಅವರಿಗೆ ಯಾವುದೇ ಲೋಪದೋಷಗಳು ಬರದಂತೆ ಸಕಲ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು. ಜತೆಗೆ ಮುಖ್ಯಮಂತ್ರಿಗಳು ಸಹ ವಿವಿಧ ಅಭಿವೃದ್ಧಿ ಕಾಮಗಾರಿಗಳು ಲೋಕಾರ್ಪಣೆಗೊಳಿಸಲು ಬರುತ್ತಿರುವುದರಿಂದ ಸಕಲ ಸೌಕರ್ಯ ಯಾವುದೇ ಲೋಪದೋಷ ಬರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪರಿಶೀಲನೆ:
ಸಭೆಯ ನಂತರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಶಾಸಕ ಎಂ.ಆರ್. ಮಂಜುನಾಥ್, ಅಧಿಕಾರಿಗಳ ತಂಡ ಮಲೆ ಮಾದೇಶ್ವರ ಬೆಟ್ಟದ ಬೃಹತ್ ಮಲೆ ಮಹದೇಶ್ವರ ಹುಲಿಯ ಮೇಲೆ ಕುಳಿತಿರುವ ಪ್ರತಿಮೆ ಬಳಿ ಪರಿಶೀಲನೆ ನಡೆಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಡಿಎಫ್‌ಒ ಸಂತೋಷ್ ಕುಮಾರ್, ಉಪ ವಿಭಾಗಾಧಿಕಾರಿ ಮಹೇಶ್, ಡಿವೈಎಸ್‌ಪಿ ಧರ್ಮೇಂದರ್, ತಾಲೂಕು ದಂಡಾಧಿಕಾರಿ ಗುರುಪ್ರಸಾದ್, ಪಿಡಬ್ಲ್ಯುಡಿ ಎಂಜಿನಿಯರ್ ಚಿನ್ನಣ್ಣ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.