ಇಂದು ಸಂಗೊಳ್ಳಿ ರಾಯಣ್ಣ ಉತ್ಸವ ಉದ್ಘಾಟಿಸಲಿರುವ ಸಿಎಂ

| Published : Jan 17 2024, 01:45 AM IST

ಇಂದು ಸಂಗೊಳ್ಳಿ ರಾಯಣ್ಣ ಉತ್ಸವ ಉದ್ಘಾಟಿಸಲಿರುವ ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಜ.17 ಮತ್ತು 18 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ ರಾಯಣ್ಣ ಶೌರ್ಯ ಭೂಮಿ (ಶಿಲ್ಪವನ) ಹಾಗೂ ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನ ಮತ್ತು ಭೋಜನಾಲಯ ಉದ್ಘಾಟನಾ ಸಮಾರಂಭ ನಡೆಯಲಿದೆ.

ಬೈಲಹೊಂಗಲ: ತಾಲೂಕಿನ ಸಂಗೊಳ್ಳಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜ.17 ಮತ್ತು 18 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ ರಾಯಣ್ಣ ಶೌರ್ಯ ಭೂಮಿ (ಶಿಲ್ಪವನ) ಹಾಗೂ ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನ ಮತ್ತು ಭೋಜನಾಲಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮಾರಂಭವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು.

ಜ.17ರಂದು ಬೆಳಗ್ಗೆ 10.15 ಜನಪದ ಕಲಾವಾಹಿನಿಯನ್ನು ಸಂಸದೆ ಮಂಗಲಾ ಅಂಗಡಿ ಉದ್ಘಾಟಿಸಲಿದ್ದಾರೆ. ಗ್ರಾಮದ ಸರಕಾರಿ ಮೈದಾನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಮಧ್ಯಾಹ್ನ 12ಕ್ಕೆ ನಡೆಯಲಿರುವ ಸಮಾರಂಭದ ಸಾನ್ನಿಧ್ಯವನ್ನು ಕಾಗಿನೆಲೆ ಶ್ರೀಕ್ಷೇತ್ರದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ವಹಿಸುವರು. ಮುಖ್ಯಅತಿಥಿಗಳಾಗಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಿವರಾಜ ತಂಗಡಗಿ, ಸುರೇಶ ಬಿ.ಎಸ್. ಆಗಮಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸುವರು.

ವಿಶೇಷ ಆಮಂತ್ರಿತರಾಗಿ ಮುಖ್ಯಸಚೇತಕ ಅಶೋಕ ಪಟ್ಟಣ, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ, ಗೌರವಾನ್ವಿತ ಅತಿಥಿಗಳಾಗಿ ಸಂಸದರು, ಶಾಸಕರುಗಳು, ಗಣ್ಯ ಮಾನ್ಯರು ಆಗಮಿಸಲಿದ್ದಾರೆ. ರಾತ್ರಿ 9ಕ್ಕೆ ವೀರರ ಸ್ಮರಣೆಗಾಗಿ ದೀಪೋತ್ಸವ ನಡೆಯಲಿದೆ.

18ರಂದು ಮಧ್ಯಾಹ್ನ 3ಕ್ಕೆ ಶಾಸಕ ಮಹಾಂತೇಶ ಕೌಜಲಗಿ ಕುಸ್ತಿ ಪಂದ್ಯ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ, ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ವಿಕಾಸ್‌ಕುಮಾರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎಸ್ಪಿ ಭೀಮಾಶಂಕರ ಗುಳೇದ ಆಗಮಿಸಲಿದ್ದಾರೆ.

ಅರ್ಜುನ ಜನ್ಯ ತಂಡದ ರಸಮಂಜರಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು- ರಾಯಣ್ಣ ವೇದಿಕೆಯಲ್ಲಿ ಜ.17ರಂದು ಬೆಳಗ್ಗೆ 11ರಿಂದ 11.30ರ ವರೆಗೆ ಅಮೋಘ ಸಿದ್ದೇಶ್ವರ ಡೊಳ್ಳಿನ ಸಂಘದಿಂದ ಡೊಳ್ಳಿನ ಪದ, ಸಂಜೆ 5ರಿಂದ ರಾತ್ರಿ 11ರ ವರೆಗೆ ಬೆಳಗಾವಿಯ ರೂಪಾ ಖಡಗಾವಿ ಅವರಿಂದ ತತ್ವಪದ, ಸಂಗೊಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ನೃತ್ಯ ರೂಪಕ, ಆರಾಧ್ಯಾ ಸಂಪಗಾಂವಿ ಮತ್ತು ತಂಡದಿಂದ ನೃತ್ಯ, ಶಂಕರ ಬೆಣ್ಣಿ ಮತ್ತು ತಂಡದಿಂದ ಭಜನಾ ಪದ ನಡೆಯಲಿದೆ. ಹಿನ್ನೆಲೆ ಗಾಯಕ ಚಂದನ ಶೆಟ್ಟಿ ತಂಡದಿಂದ ರಸಮಂಜರಿ ನಡೆಯಲಿದೆ.

ಜ.18ರಂದು ಸಂಜೆ 5ರಿಂದ ರಾತ್ರಿ 11ರ ವರೆಗೆ ಅಶೋಕ ಎಮ್ಮಿ ಮತ್ತು ತಂಡದಿಂದ ಭಜನಾ ಪದ, ಬನಶಂಕರಿ ಸಂಭ್ರಮ ಡ್ಯಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ವೈವಿಧ್ಯ, ನಂದಕುಮಾರ ದೊಡವಾಡ ಅವರಿಂದ ಸಂಗೀತ, ಶ್ರುತಿ ಹ್ಯಾಟಿ ಮತ್ತು ತಂಡದಿಂದ ಜಾನಪದ ಸಂಗೀತ, ಪ್ರಕಾಶ ಮತ್ತು ತಂಡದಿಂದ ಜೋಗತಿ ನೃತ್ಯ ರೂಪಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದಿಂದ ರಸಮಂಜರಿ ಜರುಗಲಿದೆ.