ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.30ರಂದು 38 ಕೋಟಿ ರುಪಾಯಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಉದ್ಘಾಟನೆ ಹಾಗೂ 60 ಕೋಟಿ ರುಪಾಯಿ ವೆಚ್ಚದ ರಸ್ತೆ ಅಗಲೀಕರಣದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.30ರಂದು 38 ಕೋಟಿ ರುಪಾಯಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಉದ್ಘಾಟನೆ ಹಾಗೂ 60 ಕೋಟಿ ರುಪಾಯಿ ವೆಚ್ಚದ ರಸ್ತೆ ಅಗಲೀಕರಣದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ತಾಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.30ರಂದು ಎನ್.ಆರ್.ಪುರಕ್ಕೆ ಸೇತುವೆ ಉದ್ಘಾಟನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

130 ವರ್ಷಗಳಿಂದ ನರಸಿಂಹರಾಜಪುರ ಪಟ್ಟಣದ ರಸ್ತೆ ಅಗಲೀಕರಣವಾಗಿರಲಿಲ್ಲ. ರಸ್ತೆ ಕಿರಿದಾಗಿದ್ದು ವಾಹನಗಳ ಓಡಾಟವೇ ಕಷ್ಟವಾಗಿತ್ತು.ನನ್ನ ಹುಟ್ಟೂರಿನ ಅಭಿಮಾನಕ್ಕಾಗಿ ರಸ್ತೆ ಅಗಲೀಕರಣ ಮಾಡಿ ಮನೆ ಮಾಲೀಕರಿಗೆ ಪರಿಹಾರ ಕೊಡಿಸಬೇಕು ಎಂದು 60 ಕೋಟಿ ರುಪಾಯಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ರಸ್ತೆ ಅಗಲೀಕರಣಕ್ಕೆ 20 ಕೋಟಿ ರುಪಾಯಿ ಸಾಕಾಗುತ್ತದೆ. ಉಳಿದ 40 ಕೋಟಿ ರುಪಾಯಿಯನ್ನು ನಿವೇಶನ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗುವುದು. ರಸ್ತೆ ಅಗಲೀಕರಣದಿಂದ ನರಸಿಂಹರಾಜಪುರ ಪಟ್ಟಣ ಅಭಿವೃದ್ದಿ ಕಾಣಲಿದೆ. ಆಸ್ತಿ ಬೆಲೆ ಜಾಸ್ತಿಯಾಗಲಿದೆ. ಎನ್.ಆರ್ ಪುರ ಪಟ್ಟಣದ ಚಿತ್ರವೇ ಬದಲಾಗಲಿದೆ. 11 ಜನರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಆದರೂ ರಸ್ತೆ ಅಗಲೀಕರಣ ನಿಲ್ಲುವುದಿಲ್ಲ ಎಂದು ಹೇಳಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.29 ರಂದು ಸಂಜೆ 5 ಗಂಟೆಗೆ ಎನ್.ಆರ್.ಪುರಕ್ಕೆ ಬಂದು ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಾ.30ರಂದು ರಸ್ತೆ ಅಗಲೀಕರಣ ಗುದ್ದಲಿ ಪೂಜೆ, ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಉದ್ಘಾಟನೆ ನೆರವೇರಿಸಲಿದ್ದಾರೆ. ಮದ್ಯಾಹ್ನದ ನಂತರ ಬೆಂಗಳೂರಿಗೆ ವಾಪಾಸು ಹೋಗಲಿದ್ದಾರೆ. ಆದ್ದರಿಂದ 3 ತಾಲೂಕಿನ ಅಧಿಕಾರಿಗಳು ತಮ್ಮ ಜವಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, 3 ತಾಲೂಕಿನ ಪಿಡಿಒಗಳ ಸಭೆ ಕರೆದು ಅವರಿಗೆ ಕೆಲವು ಜವಬ್ದಾರಿ ನೀಡಬೇಕು. 10 ದಿನದ ಒಳಗೆ ಕೆಲವು ಪೂರ್ವ ಸಿದ್ದತೆ ಆಗಬೇಕಾಗಿದೆ. ಪ್ರತಿ ತಾಲೂಕಿನ 5 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಿದ್ದು 3 ತಾಲೂಕಿನ ತಹಸೀಲ್ದಾರ್ ಇದನ್ನು ಸಿದ್ದಪಡಿಸಬೇಕು. 50 ಕೋಟಿ ರುಪಾಯಿ ವೆಚ್ಚದ ಕಾಮಗಾರಿಗೆ ಅನುದಾನ ಬರುತ್ತಿದ್ದು ಒಂದೇ ಕಲ್ಲಿನಲ್ಲಿ ಶಂಕುಸ್ಥಾಪನೆ ಮಾಡಬೇಕಾಗಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಮಾತನಾಡಿ, ಮುಂದೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುವುದು. ಲೋಕೋಪಯೋಗಿ ಇಲಾಖೆಯವರು ರಾಜ್ಯ ಮಟ್ಟದ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮಾಡಿಸಬೇಕು. ಅತಿಥಿಗಳಿಗೆ ಕಡ್ಡಾಯವಾಗಿ ಆಹ್ವಾನ ಪತ್ರಿಕೆ ನೀಡಬೇಕು.ಪೊಲೀಸ್ ಇಲಾಖೆ, ಅಗ್ನಿಶ್ಯಾಮಕ ದಳದವರು ವೇದಿಕೆಯ ಬಗ್ಗೆ ನಿಗಾ ವಹಿಸಬೇಕು. ಆರೋಗ್ಯ ಇಲಾಖೆಯವರು ಆ್ಯಂಬುಲೆನ್ಸ್ ಸಿದ್ದತೆ ಮಾಡಿಕೊಂಡಿರಬೇಕು. ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಹಾಗೂ ಫಾರೆಸ್ಟ್ ಐಬಿ ಸಿದ್ದವಾಗಿಡಬೇಕು. ಶೃಂಗೇರಿ ವಿಧಾಸಭಾ ವ್ಯಾಪ್ತಿಯ ಕಾಮಗಾರಿಯ ಬಗ್ಗೆ, ಅನುದಾನ ಬಿಡುಗಡೆಯಾಗಿರುವ ಬಗ್ಗೆ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಗೆ ಕಳಿಸಬೇಕು ಎಂದರು.

ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ತಹಸೀಲ್ದಾರ್ ಡಾ.ನೂರಲ್ ಹುದಾ, ತಾಲೂಕು ಪಂಚಾಯಿತಿ ಇಒ ನವೀನ್, ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್, ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಸತೀಶ್, ಶೃಂಗೇರಿ ತಾಲೂಕು ಪಂಚಾಯಿತಿ ಇಒ ಸುದೀಪ್ ಇದ್ದರು.