ಮುಖ್ಯಮಂತ್ರಿಯಾದ ನಂತರ ಡಿ.ಕೆ.ಶಿವಕುಮಾರ್ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕಿದೆ. ಕೆಲ ವರ್ಷಗಳ ಹಿಂದೆ ಮದ್ದೂರಿನಲ್ಲಿ ಸಿಎಂ ಕಾರ್ಯಕ್ರಮ ನಡೆದಿತ್ತು. ಈಗ ಜಿಲ್ಲಾ ಕೇಂದ್ರಕ್ಕೆ ಸಿಎಂ ಬರುತ್ತಿದ್ದಾರೆ. ಹೀಗಾಗಿ ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಿಂದ ಜನರನ್ನು ಕರೆತರಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು, ಶಿಲಾನ್ಯಾಸ ನೆರವೇರಿಸಲು ಮಂಡ್ಯ ನಗರಕ್ಕೆ ಅ.31ರಂದು ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾರ್ಯಕ್ರಮಕ್ಕೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಮುಖಂಡರು ಶ್ರಮಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ಮಂಡ್ಯಕ್ಕೆ ಸಿಎಂ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದ ಶಿವಪುರ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ಹಾಗೂ ಭಾರತೀ ನಗರ ಬ್ಲಾಕ್ ಕಾಂಗ್ರೆಸ್ನಿಂದ ನಡೆದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಮಂತ್ರಿಯಾದ ನಂತರ ಡಿ.ಕೆ.ಶಿವಕುಮಾರ್ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕಿದೆ. ಕೆಲ ವರ್ಷಗಳ ಹಿಂದೆ ಮದ್ದೂರಿನಲ್ಲಿ ಸಿಎಂ ಕಾರ್ಯಕ್ರಮ ನಡೆದಿತ್ತು. ಈಗ ಜಿಲ್ಲಾ ಕೇಂದ್ರಕ್ಕೆ ಸಿಎಂ ಬರುತ್ತಿದ್ದಾರೆ. ಹೀಗಾಗಿ ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಿಂದ ಜನರನ್ನು ಕರೆತರಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಅಲ್ಲದೇ, ಕುಡಿಯುವ ನೀರು, ಮಧ್ಯಾಹ್ನ ಅಚ್ಚುಕಟ್ಟಾದ ಊಟ ವ್ಯವಸ್ಥೆ ಮಾಡಲಾಗಿದೆ ಎಂದರು.ಬಸ್ಗಳಲ್ಲಿ ಜನರನ್ನು ಕರೆ ತರುವುದು ಮತ್ತು ಅವರ ಊರುಗಳಿಗೆ ವಾಪಸ್ ಕರೆದೊಯ್ಯಲು ಪ್ರತಿ ಗ್ರಾಪಂ ಪಿಡಿಒ, ಅಧಿಕಾರಿ ವರ್ಗದ ಜೊತೆಗೆ ಪಕ್ಷದ ಕಾರ್ಯಕರ್ತರು ಕೈಜೋಡಿಸಲಿದ್ದಾರೆ. ಹೀಗಾಗಿ ಜನರು ಸಿಎಂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೊನೆಯವರೆಗೂ ಹಾಜರಿರುವಂತೆ ಮನವಿ ಮಾಡಿದರು.
ಜಿಲ್ಲೆಯ ಭೇಟಿ ನಂತರ ಸಿಎಂ ಡಿ.ಕೆ.ಶಿವಕುಮಾರ್ ಮದ್ದೂರಿಗೆ ಬರಲಿದ್ದಾರೆ. ಸಾವಿರಾರು ಕೋಟಿಗಳ ಅನುದಾನಕ್ಕೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ರೂಪುರೇಷೆ ತಯಾರಿಸಲಾಗುತ್ತಿದೆ. ಕಳೆದ ಬಾರಿ 1300 ಕೋಟಿ ಅನುದಾನಕ್ಕೆ ಚಾಲನೆ ನೀಡಲಾಗಿತ್ತು. ಈ ಬಾರಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಉದ್ಘಾಟನೆ ಮಾಡಲಿದ್ದಾರೆ ಎಂದರು.ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇನ್ನು ಒಂದುವರೆ ವರ್ಷ ಅಭಿವೃದ್ಧಿ ಕೆಲಸ ಮಾಡಬೇಕಿದೆ.
ಬೇರೆ ಪಕ್ಷಗಳಿಂದ ಸಿಎಂ, ಮಂತ್ರಿ ಆಗಿದ್ದರೂ ಜಿಲ್ಲೆ ಮತ್ತು ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವು ತೋರಿಲ್ಲ. ಆದರೆ, ಸಿಎಂ ಡಿ.ಕೆ.ಶಿವಕುಮಾರ್ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರಿಗೆ ಜನತೆ ಅಭೂತಪೂರ್ವ ಸ್ವಾಗತ ಕೋರಬೇಕಿದೆ. ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.ಜಿಲ್ಲೆಗೆ ಇದುವರೆಗೂ 15 ಸಾವಿರ ಕೋಟಿ ರು. ಬಿಡುಗಡೆ:
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಜಿಲ್ಲೆಗೆ 10 ಸಾವಿರ ಕೋಟಿ ರು. ಬಿಡುಗಡೆಯಾಗಿದ್ದು, ನೀರಾವರಿ ಯೋಜನೆಗಳಿಗೆ ಸಿಂಹಪಾಲು ಸಿಕ್ಕಿದೆ. 3 ವರ್ಷಗಳಲ್ಲಿ 5 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ನೀಡಿದೆ. ಒಟ್ಟಾರೆ ಜಿಲ್ಲೆಗೆ ಇದುವರೆಗೂ 15 ಸಾವಿರ ಕೋಟಿ ರು. ಬಿಡುಗಡೆಯಾಗಿದೆ ಎಂದರು.ಮುಖ್ಯಮಂತ್ರಿಗಳು ವಿವಿಧ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲೆಯಲ್ಲೆ ಮದ್ದೂರು ತಾಲೂಕಿನಲ್ಲಿ ಮೊದಲ ಕಾಂಗ್ರೆಸ್ ಭವನ ನಿರ್ಮಾಣ ಮಾಡಲಾಗುತ್ತಿದೆ. ಮಂಡ್ಯದಲ್ಲಿ ಇಂದಿರಾ ಭವನ ನಿರ್ಮಾಣಕ್ಕೆ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದರು.
ಸಭೆಯಲ್ಲಿ ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಚಲುವರಾಜು, ಅಣ್ಣೂರು ರಾಜೀವ್, ಮುಖಂಡರಾದ ಸ್ವಾರ್ ಚಂದ್ರು, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಸನ್ನಕುಮಾರ್, ಮಹದೇವಯ್ಯ, ಮಮತಾ ಶಂಕರೇಗೌಡ, ಇಂತಿಯಾಜ್ ಮತ್ತಿತರರು ಇದ್ದರು.