ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಸರ್ಕಾರ ಮೂರು ವರ್ಷ ಸತತ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ 39 ಸಾವಿರ ಕೋಟಿ ರು.ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ರಾಷ್ಟ್ರೀಯ ಭೀಮ ಪಡೆ ರಾಜ್ಯಾಧ್ಯಕ್ಷ ಎಚ್.ಎ.ಆತ್ಮಾನಂದ ಆರೋಪಿಸಿದರು.

ಇದೀಗ ಮಂಡನೆಯಾಗುತ್ತಿರುವ ಬಜೆಟ್‌ನಲ್ಲಿ ಮತ್ತೆ 15 ಸಾವಿರ ಕೋಟಿ ರು.ಗಳನ್ನು ಮುಳುಗಿಸಲು ಸಜ್ಜಾಗಿದ್ದಾರೆ. ಆ ಕಾಯ್ದೆಯನ್ನು ಕಿತ್ತುಹಾಕಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯಿದೆಯನ್ನು ಬಲಪಡಿಸಿದ್ದೇ ನಾವು ಎಂದು ಬೆನ್ನುತಟ್ಟಿಕೊಳ್ಳುವ ಸಿದ್ದರಾಮಯ್ಯ ಒಳಗೊಳಗೆ ದಲಿತರ ಮೀಸಲು ನಿಧಿಗೆ ಕನ್ನ ಹಾಕಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.

ಪ್ರತಿ ಇಲಾಖೆಯು ತನ್ನ ಬಜೆಟ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ತೆಗೆದಿರಿಸಿ ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ಬಳಸಬೇಕು. ಪ್ರತಿ ಇಲಾಖೆಯೂ ಉಪ ಯೋಜನೆಯನ್ನು ರೂಪಿಸಬೇಕೆಂಬ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಗ್ಯಾರಂಟಿ ಯೋಜನೆ ಇಲಾಖೆಗಳ ಉಪಯೋಜನೆಯೇ ಅಲ್ಲ. ಪಕ್ಷದ ಚುನಾವಣಾ ಪ್ರಣಾಳಿಕೆ ಜಾರಿಗೆ ತರುವ ಸರ್ಕಾರದ ಮುಖ್ಯಯೋಜನೆ. ಹೀಗಾಗಿ ದಲಿತರ ಮೀಸಲು ನಿಽಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದು ಪರಮ ಅನ್ಯಾಯ ಎಂದು ಟೀಕಿಸಿದರು.

2025-26ರಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿಗೆ ಬಜೆಟ್‌ನಲ್ಲಿ ನಿಗದಿಯಾಗಿದ್ದು 42,018 ಕೋಟಿ ರು. ಆದರೆ, ಈ ವರ್ಷ -.16ರವರೆಗೆ ಬಳಕೆಯಾದದ್ದು 23,788 ಕೋಟಿ ರು. ಮಾತ್ರ. ಇದರಲ್ಲಿ ಗ್ಯಾರಂಟಿ ಬಾಬ್ತು 13,443 ಕೋಟಿ ರು. ಈ ವರ್ಷ ಎಸ್‌ಸಿಎಸ್‌ಪಿ-ಟಿಎಸ್‌ಪಿಗೆ ಖರ್ಚಾಗಿರುವುದು 10,345 ಕೋಟಿ ರು. ಮಾತ್ರ. ಇನ್ನೂ 18,230 ಕೋಟಿ ರು. ಖರ್ಚಾಗದೇ ಉಳಿದಿದೆ. ಈ ಅನ್ಯಾಯಕ್ಕೆ ಯಾರನ್ನು ಶಿಕ್ಷಿಸಬೇಕು ಎಂದು ಪ್ರಶ್ನಿಸಿದರು.


ದಲಿತರ ಮೀಸಲು ನಿಧಿಯನ್ನೇ ನಂಬಿಕೊಂಡಿದ್ದ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ, ವಾಲ್ಮೀಕಿ, ತಾಂಡಾ, ಲಿಡ್ಕರ್, ಭೋವಿ, ಸಫಾಯಿ ಕರ್ಮಚಾರಿ ನಿಗಮಗಳು ಸೊರಗಿವೆ. ಇನ್ನು ಈ ಯೋಜನೆಯಿಂದ -ಲಾನುಭವಿಗಳಿಗೆ ಸಿಗಬೇಕಿದ್ದ ಗಂಗಾಕಲ್ಯಾಣ, ಐರಾವತ ವಾಹನ, ಭೂ ಒಡೆತನ, ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ವಿದೇಶಗಳಲ್ಲಿ ಉನ್ನತ ವ್ಯಾಸಂಗ, ವಸತಿ ಶಾಲೆಗಳು, ಹಾಸ್ಟೆಲ್ ಕಟ್ಟಡಗಳು ನೆಲಕಚ್ಚಿವೆ ಎಂದರು.

ಈ ಬಾರಿಯ ಬಜೆಟ್‌ಗೆ ಮೊದಲೇ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣಕ್ಕೆ ಕೈ ಹಾಕುವುದಿಲ್ಲವೆಂದು ಮೊದಲೇ ಘೋಷಿಸಬೇಕು. ಸಂವಿಧಾನ ರಕ್ಷಣೆ ಅಭಿಯಾನಕ್ಕೆ ಖಜಾನೆಯಿಂದಲೇ ಹಣಕೊಡಬೇಕು. ಮೂರು ವರ್ಷಗಳಿಂದ ದುರ್ಬಳಕೆಯಾಗಿರುವ 39 ಸಾವಿರ ಕೋಟಿ ರು. ಹಣವನ್ನು ವಾಪಸ್ ಕೊಡಬೇಕು, 39 ಸಾವಿರ ಕೋಟಿ ರು. ಹಣದಲ್ಲಿ ಎಲ್ಲಾ ಜಿಲ್ಲೆಗಳ ದಲಿತರ ಅಭಿವೃದ್ಧಿಗೆ ಮೂಲಸೌಲಭ್ಯ ಒದಗಿಸಲು ತಲಾ 1 ಸಾವಿರ ಕೋಟಿ ರು. ನೀಡುವುದು, ಎಲ್ಲಾ ಎಸ್ಸಿ, ಎಸ್ಟಿ ನಿಗಮಗಳಿಗೆ 1 ಸಾವಿರ ಕೋಟಿ ರು. ನೀಡುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ನಿತ್ಯಾನಂದ, ನಾರಾಯಣಸ್ವಾಮಿ, ಶಶಿಕುಮಾರ್ ಇದ್ದರು.