ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ರೈತ ವಿರೋಧಿ ಎಂದು ಖಂಡಿಸಿರುವ ಬಿಜೆಪಿ, ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

6ಕ್ಕೆ ಶಿರಸಿಯಲ್ಲಿ ಬಿಜೆಪಿ ಪ್ರತಿಭಟನೆಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ರೈತ ವಿರೋಧಿ ಎಂದು ಖಂಡಿಸಿರುವ ಬಿಜೆಪಿ, ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಇದರ ಭಾಗವಾಗಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಡಿ.6ರಂದು ಶಿರಸಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯೆದುರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಕಾರವಾರ-ಅಂಕೋಲಾ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಮುಳುಗಿರುವ ಸಚಿವರು ಮತ್ತು ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಪ್ರಮುಖವಾಗಿ ರೈತ ಮಕ್ಕಳಿಗಾಗಿ ಜಾರಿಗೆ ತಂದಿದ್ದ ವಿದ್ಯಾನಿಧಿ ವಿದ್ಯಾರ್ಥಿವೇತನ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಜೊತೆಗೆ ರಾಜ್ಯ ಸರ್ಕಾರ ನೀಡುತ್ತಿದ್ದ ₹4,000 ಸಹಾಯಧನವನ್ನು ತಡೆಹಿಡಿಯಲಾಗಿದೆ. ಮಳೆಯಿಂದಾಗಿ ಮೆಕ್ಕೆಜೋಳ, ಭತ್ತ, ಹತ್ತಿ ಸೇರಿದಂತೆ ಮೀನುಗಾರಿಕೆ ಮತ್ತು ಹೈನುಗಾರಿಕೆ ವಲಯಗಳು ನಷ್ಟ ಅನುಭವಿಸುತ್ತಿವೆ. ಆದರೆ, ಈ ಬಗ್ಗೆ ಸಮೀಕ್ಷೆ ನಡೆಸಲು ಅಥವಾ ರೈತರ ಕಷ್ಟ ಆಲಿಸಲು ಯಾವೊಬ್ಬ ಸಚಿವರೂ ಇತ್ತ ಸುಳಿದಿಲ್ಲ. ರೈತರು ರಕ್ತದ ಕಣ್ಣೀರು ಹಾಕುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಕಿಡಿಕಾರಿದ ಅವರು, ಶಕ್ತಿ ಯೋಜನೆಯಡಿ ಬಸ್ ಫ್ರೀ ಎನ್ನುತ್ತಾರೆ, ಆದರೆ ಬಸ್‌ಗಳ ನಿರ್ವಹಣೆ ಇಲ್ಲದೆ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಬಸ್‌ಗಳಿಗೆ ನಟ್, ಬೋಲ್ಟ್, ಟಯರ್‌ಗಳ ಕೊರತೆಯಾಗಿದ್ದು ಮೊದಲು ಡಿಪೋಗಳ ಪರಿಸ್ಥಿತಿಯನ್ನು ಸರಿಪಡಿಸಿ. ಅಲ್ಲದೇ ರಸ್ತೆಗಳು ಗುಂಡಿಬಿದ್ದಿದ್ದು, ಜನರ ಪ್ರಾಣಕ್ಕೆ ಸಂಚಕಾರ ತಂದಿವೆ. ಆದರೆ ಸರ್ಕಾರವು ಕೇವಲ ''''ಬ್ರೇಕ್‌ಫಾಸ್ಟ್ ನಾಟಕ'''' ಮಾಡುತ್ತಿದ್ದು, ಅಧಿವೇಶನ ಮುಕ್ತಾಯಗೊಂಡ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಮೋಸ ಮಾಡಲು ಮತ್ತು ನಾವೆಲ್ಲ ಚೆನ್ನಾಗಿದ್ದೇವೆ ಎಂದು ತೋರಿಸಲು ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಪ್ರತಿಭಟನೆ ಬಳಿಕ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಗರ ಅಧ್ಯಕ್ಷ ನಾಗೇಶ ಕುರಡೇಕರ್, ನಗರಸಭಾ ಅಧ್ಯಕ್ಷ ರವಿರಾಜ ಅಂಕೋಲೆಕರ್, ಜಿಲ್ಲಾ ಬಿಜೆಪಿ ಪ್ರಮುಖರು, ನಗರಸಭೆ ಸದಸ್ಯರು, ರೈತ ಮೋರ್ಚಾ ಸದಸ್ಯರು, ಮಂಡಲದ ಸದಸ್ಯರು ಸೇರಿದಂತೆ ಹಲವರು ಭಾಗಿಯಾದ್ದರು.ಯಂತ್ರ ಅಳವಡಿಸಲಿಉತ್ತರ ಕನ್ನಡ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹150 ಕೋಟಿ ಮಂಜೂರು ಮಾಡಲಾಗಿತ್ತು. ಇದೀಗ ಕಟ್ಟಡ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆಗೆ ಬರುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಇನ್ನೂ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳಾಗಲಿ, ಆಧುನಿಕ ಉಪಕರಣಗಳಾಗಲಿ ಅಳವಡಿಕೆಯಾಗಿಲ್ಲ. ಇಂದಿಗೂ ಸಣ್ಣ ಸ್ಕ್ಯಾನಿಂಗ್‌ಗೂ ಜನರು ಮಂಗಳೂರು ಅಥವಾ ಗೋವಾಕ್ಕೆ ಅಲೆಯುವಂತಾಗಿದೆ. ಉಪಕರಣಗಳ ಖರೀದಿಗೆ ಮೀಸಲಿಟ್ಟಿದ್ದ ₹30 ಕೋಟಿ ಅನುದಾನವನ್ನು ಮೊದಲು ಬಿಡುಗಡೆ ಮಾಡಿ, ಯಂತ್ರಗಳನ್ನು ಅಳವಡಿಸಿದ ನಂತರವೇ ಸಿಎಂ ಉದ್ಘಾಟನೆಗೆ ಬರಬೇಕು. ಕೇವಲ ಖಾಲಿ ಕಟ್ಟಡವನ್ನು ಉದ್ಘಾಟಿಸಲು ಬಂದರೆ ತೀವ್ರವಾಗಿ ಪ್ರತಿಭಟಿಸಿ, ಧಿಕ್ಕಾರ ಕೂಗಬೇಕಾಗುತ್ತದೆ ಎಂದು ರೂಪಾಲಿ ಎಚ್ಚರಿಕೆ ನೀಡಿದ್ದಾರೆ.