ಸಾರಾಂಶ
ಸಿದ್ದರಾಮಯ್ಯನವರು ಆರೋಪಿತನಲ್ಲವೆಂದು ತೀರ್ಪು ಬಂದಲ್ಲಿ ಮತ್ತೆ ಸಿಎಂ ಆಗಬಹುದು. ಹೈಕೋರ್ಟ್ ತೀರ್ಪು ಬರುವ ಬರುವ ಮೊದಲು ನಾನು ತಪ್ಪೇ ಮಾಡಿಲ್ಲ ಎಂದು ಹೇಳಿದರು, ಈಗ ಮೇಲ್ನೋಟಕ್ಕೆ ತಪ್ಪು ಕಂಡಿಬಂದಿದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಸಿಎಂ ಹೇಳಿದ್ದು ಸರಿ ಇಲ್ಲ ಎಂದಾಯ್ತಲ್ಲ ಎಂದು ಸಂತೋಷ್ ಹೆಗ್ಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮೈಸೂರಿನ ಮೂಡಾ ಹಗರಣ ವಿಚಾರದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಹೈಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರೆ ಒಳಿತು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ಸಂಸ್ಥಾಪನಾ ದಿನಾಚರಣೆಗೆ ಆಗಮಿಸಿದ ಅವರು ಸುದ್ದಿಗಾರರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲು ಅಪಘಾತವಾಗಿದ್ದಾಗ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈಗ ಆ ರೀತಿಯ ಪ್ರವೃತ್ತಿ ಕಾಣಸಿಗುತ್ತಿಲ್ಲ. ರಾಜಿನಾಮೆ ಕೊಡಬೇಕು ಅಥವಾ ಕೊಡಬಾರದು ಎಂಬುದು ಅವರಿಗೆ ಬಿಟ್ಟದ್ದು. ರಾಜಿನಾಮೆ ಕೊಡದಿದ್ದರೆ ಕಾನೂನಿನಲ್ಲಿ ತಪ್ಪಿಲ್ಲ. ಹೈಕೋರ್ಟ್ ತೀರ್ಪು ನೀಡಿರುವುದು ಮೂಡ ವಿಚಾರದಲ್ಲಿ ಮಾತ್ರ. ಆದರೆ ಈ ವಿಚಾರದಲ್ಲಿ ಹೈಕೋರ್ಟ್ ಮೇಲ್ನೋಟಕ್ಕೆ ಪುರಾವೆ ಇದೆ ಎಂದು ಹೇಳಿದೆ. ಇಂಥ ಗಂಭೀರ ಆರೋಪಗಳಿರುವಾಗ ರಾಜಿನಾಮೆ ನೀಡಬೇಕು. ಹಾಗಾಗಿ ಸಾರ್ವಜನಿಕರ ದೃಷ್ಟಿಯಲ್ಲಿ ರಾಜಿನಾಮೆ ಕೊಡುವುದು ಉತ್ತಮ ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.ಯಾವ ಸಂಸ್ಥೆಯಿಂದ ತನಿಖೆ ನಡೆಸಿದರೆ ಉತ್ತಮ ಎಂದು ನಾನು ಹೇಳುವುದಿಲ್ಲ, ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಸಿಬಿಐ ಅಥವಾ ಲೋಕಾಯುಕ್ತ ಎಂದು ನಾನು ಹೇಳಲು ಹೋಗುವುದಿಲ್ಲ. ಯಾರಿಗೆ ಕೊಟ್ಟರೂ ಪ್ರಾಮಾಣಿಕ ತನಿಖೆ ಮಾಡಬಹುದು. ಸಿದ್ದರಾಮಯ್ಯನವರು ಆರೋಪಿತನಲ್ಲವೆಂದು ತೀರ್ಪು ಬಂದಲ್ಲಿ ಮತ್ತೆ ಸಿಎಂ ಆಗಬಹುದು. ಹೈಕೋರ್ಟ್ ತೀರ್ಪು ಬರುವ ಬರುವ ಮೊದಲು ನಾನು ತಪ್ಪೇ ಮಾಡಿಲ್ಲ ಎಂದು ಹೇಳಿದರು, ಈಗ ಮೇಲ್ನೋಟಕ್ಕೆ ತಪ್ಪು ಕಂಡಿಬಂದಿದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಸಿಎಂ ಹೇಳಿದ್ದು ಸರಿ ಇಲ್ಲ ಎಂದಾಯ್ತಲ್ಲ ಎಂದರು.