ಕನ್ನಡಪ್ರಭ ವಾರ್ತೆ ಮಡಿಕೇರಿ 2029ರ ನಂತರ ಕೋವಿ-ತೋಕ್ ಆಚರಣೆಗೆ ಯಾವುದೇ ಸಾಂವಿಧಾನಿಕ ಧಕ್ಕೆ ಬಾರದಂತೆ ತಡೆಯಲು, ಕೊಡವ ಧಾರ್ಮಿಕ ಸಂಸ್ಕಾರವನ್ನು ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಚಟುವಟಿಕೆಗಳ ಕಾಯ್ದೆಯ ವ್ಯಾಪ್ತಿಗೆ ತರಬೇಕು. ಆ ಮೂಲಕ ಆಯುಧ ಕಾಯ್ದೆಯ ತಿದ್ದುಪಡಿಗಳ ಪ್ರಭಾವಕ್ಕೆ ಒಳಗಾಗದಂತೆ ಇದಕ್ಕೆ ಶಾಶ್ವತ ರಕ್ಷಣೆ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಭಾರತೀಯ ಕಾನೂನು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಭಾರತದ ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ಪ್ರಾಚೀನ, ಆದಿಮ ಸಂಜಾತ, ಏಕ-ಜನಾಂಗೀಯ, ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ಕೊಡವ ಧಾರ್ಮಿಕ ಸಂಸ್ಕಾರವಾದ ಕೋವಿ-ತೋಕ್ ಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆಯುಧ (ತಿದ್ದುಪಡಿ) ಕಾಯ್ದೆ, 2019ರ ಪ್ರಕಾರ, ಆಯುಧ ಕಾಯ್ದೆ 1959ರ ಅಡಿಯಲ್ಲಿ ನೀಡಲಾದ ವಿಶೇಷ ವಿನಾಯಿತಿಗಳಿಗೂ ಸಹ ಪ್ರತಿ 10 ವರ್ಷಗಳಿಗೊಮ್ಮೆ ನವೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆಯುಧ ನಿಯಮಾವಳಿಗಳು 1962ರ ಅಡಿಯಲ್ಲಿ ಕೊಡವ ಜನಾಂಗಕ್ಕೆ ಇರುವ ಪ್ರಸ್ತುತ ವಿನಾಯಿತಿಯು 2029ರಲ್ಲಿ ಮುಕ್ತಾಯಗೊಳ್ಳಲಿದೆ. ಇದು ಆಡಳಿತಾತ್ಮಕ ಅಥವಾ ಶಾಸಕಾಂಗದ ಕ್ರಮದ ಮೂಲಕ ಕೊಡವರ ಪ್ರಾಚೀನ ಧಾರ್ಮಿಕ ಸಂಸ್ಕಾರವಾದ ಕೋವಿ-ತೋಕ್ ನಶಿಸಿಹೋಗುವ ಸನ್ನಿಹಿತ ಆಪತ್ತನ್ನು ತಂದೊಡ್ಡಿದೆ. ಕೊಡವರ ಧಾರ್ಮಿಕ ಸಂಸ್ಕಾರವಾದ ಕೋವಿ-ತೋಕ್ ಗೆ ಸಾಂವಿಧಾನಿಕ ರಕ್ಷಣೆ ನೀಡಬೇಕೆಂದು ಅತ್ಯಂತ ಗೌರವಪೂರ್ವಕವಾಗಿ ಒತ್ತಾಯಿಸುತ್ತದೆ, ಕೋವಿ-ತೋಕ್ ಧರಿಸುವ ಮತ್ತು ಆರಾಧಿಸುವ ಹಕ್ಕನ್ನು ಅತ್ಯಗತ್ಯ ಧಾರ್ಮಿಕ ಆಚರಣೆ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಚಟುವಟಿಕೆಗಳ ಕಾಯ್ದೆಯ ಮೂಲಕ ಅಥವಾ ಆಯುಧ ಕಾಯ್ದೆ, 1959 ಕ್ಕೆ ಸೂಕ್ತ ತಿದ್ದುಪಡಿ ತರುವ ಮೂಲಕ ಕಾಯಂ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.1949ರ ಸರ್ದಾರ್ ಪಟೇಲರ ಉಲ್ಲೇಖವು ಅತ್ಯಂತ ಮೌಲ್ಯಯುತವಾದ ಸಾಂವಿಧಾನಿಕ ಆಧಾರವಾಗಿದೆ. ಇದು ಕೋವಿ-ತೋಕ್ ಅನ್ನು ದೇಶದ ಸಂಸ್ಥಾಪಕ ನಾಯಕರು ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯೊಂದಿಗೆ ಬೆಸೆಯುತ್ತದೆ. ಭಾರತದ ಉಕ್ಕಿನ ಮನುಷ್ಯ ಮತ್ತು ಅಖಂಡ ಭಾರತದ ಶಿಲ್ಪಿ ಸರ್ದಾರ್ ವಲ್ಲಭಭಾಯ್ ಪಟೇಲರು, 1949ರಲ್ಲಿ ರಾಷ್ಟ್ರೀಯ ಸಂಯೋಜನೆ ಮತ್ತು ಆಯುಧ ನೀತಿಯ ಕುರಿತಾದ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಕೊಡವ ಸಮುದಾಯ ಮತ್ತು ಅವರ ಕೋವಿ ಹೆಮ್ಮೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಕೊಡವರ ಕೋವಿ ಹೆಮ್ಮೆಯು ಅವರ ಅಸ್ಮಿತೆ, ನಿಷ್ಠೆ ಮತ್ತು ದೇಶದ ಗಡಿಗಳನ್ನು ಕಾಯ್ದ ಅವರ ಶೌರ್ಯದ ಅವಿಭಾಜ್ಯ ಅಂಗ ಎಂಬುದನ್ನು ಸರ್ದಾರ್ ಪಟೇಲರು ಗುರುತಿಸಿದ್ದರು. ಸಾರ್ವಭೌಮ ಸಂಸತ್ತಿನಲ್ಲಿ ನಡೆದ ಈ ಅಂಗೀಕಾರವು, ಕೊಡವರ ಅಸ್ತಿತ್ವಕ್ಕೆ ಕೋವಿ-ತೋಕ್ ಅತ್ಯಗತ್ಯ ಎಂಬುದಕ್ಕೆ ರಾಜ್ಯ ನೀಡಿರುವ ಮೂಲಭೂತ ಮನ್ನಣೆಯಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.