ಸಾರಾಂಶ
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ಬಿಟ್ಟಂಗಾಲ ಜಂಕ್ಷನ್‌ನಲ್ಲಿ ಜನಜಾಗೃತಿ ಮಾನವ ಸರಪಳಿ ಗುರುವಾರ ಏರ್ಪಟ್ಟಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಲ್ಯಾಂಡ್ ನಲ್ಲಿ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ತಡೆಯದಿದ್ದಲ್ಲಿ ಅತ್ಯಂತ ಸೂಕ್ಷ್ಮ ಆದಿಮಸಂಜಾತ ಕೊಡವ ಕುಲದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ಬಿಟ್ಟಂಗಾಲ ಜಂಕ್ಷನ್‌ನಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದ್ದು, ಇವರು ಇಂದು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್ ನ ಪರಿಸರ ಸಂಪೂರ್ಣ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ಕೊಡವ ಲ್ಯಾಂಡ್ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಕರೆ ನೀಡಿದರು.
ಮುದ್ದಿಯಡ ಲೀಲಾವತಿ, ಮಾಳೇಟಿರ ವಿಮಲ, ನೆಲ್ಲಮಕ್ಕಡ ಯಶೋಧ, ಪೊನ್ನಕಚ್ಚಿರ ಶೈಲಾ, ಮಳವಂಡ ಕವಿತಾ, ಪೊರ್ಕೊಂಡ ದಕ್ಷ, ಪೊರ್ಕೊಂಡ ನಿಶಾ, ಅಪ್ಪಂಡೆರಂಡ ಭವ್ಯ, ಮಾಚೆಟ್ಟಿರ ಚೋಟು ಕಾವೇರಪ್ಪ, ಕಾಳೆಂಗಡ ರಮೇಶ್, ಬುಟ್ಟಿಯಂಡ ಸೋಮಣ್ಣ, ಗುಡ್ಡಂಡ ದೀಪಕ್, ಮಾಚೆಟ್ಟಿರ ಸಚಿನ್, ಬೊಪ್ಪಂಡ ಸತೀಶ್, ಪೊನ್ನಕಚ್ಚಿರ ಎಸ್.ಪೂಣಚ್ಚ, ಕೇಳಪಂಡ ಗಣಪತಿ, ಕೊಟ್ಟಿಯಂಡ ಮಂಜು ಮತ್ತಿತರರು ಹಾಜರಿದ್ದರು.