ಸಾರಾಂಶ
ಹೊಸ ವರ್ಷದಲ್ಲಿ ಮತ್ತೆ ಕೊಡವ ಲ್ಯಾಂಡ್ ಹೋರಾಟವನ್ನು ತೀವ್ರಗೊಳಿಸಲಿದ್ದು, ಶುಕ್ರವಾರ ಬೆಳಗ್ಗೆ 10.30ರಿಂದ 11.30ರ ವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಿ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಸಲ್ಲಿಸುವುದಾಗಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾಹಿತಿ ನೀಡಿದ್ದಾರೆ.
ಮಡಿಕೇರಿ: ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಆಯೋಗ ರಚಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜ.5 ರಂದು ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೊಸ ವರ್ಷದಲ್ಲಿ ಮತ್ತೆ ಕೊಡವ ಲ್ಯಾಂಡ್ ಹೋರಾಟವನ್ನು ತೀವ್ರಗೊಳಿಸಲಿದ್ದು, ಶುಕ್ರವಾರ ಬೆಳಗ್ಗೆ 10.30ರಿಂದ 11.30ರ ವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಿ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ.ಭೂ- ರಾಜಕೀಯ ಸ್ವಾಯತ್ತತೆಗಾಗಿ ಕೊಡವ ಕ್ವೆಸ್ಟ್‌ನ ಕಾನೂನುಬದ್ಧ ಆಕಾಂಕ್ಷೆಗಳನ್ನು ಪರಿಹರಿಸಲು 2 ನೇ ರಾಜ್ಯಗಳ ಮರು-ಸಂಘಟನೆ ಆಯೋಗವನ್ನು ರಚಿಸಬೇಕು. ಈ ಕುರಿತು ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸಿಎನ್‌ಸಿ ಪರ ಕಾನೂನು ಹೋರಾಟ ಮಾಡುತ್ತಿದ್ದಾರೆ. ಸರ್ಕಾರಗಳು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಾಚಪ್ಪ ಒತ್ತಾಯಿಸಿದ್ದಾರೆ.
ಸಿಎನ್‌ಸಿ ಕೋರಿಕೆ ಮೇರೆಗೆ ಹೈಕೋರ್ಟ್ ಆದೇಶ ಮಾಡಿರುವಂತೆ ಕೊಡವರಿಗೆ ಎಸ್‌ಟಿ ಟ್ಯಾಗ್ ದೊರೆಯಲು ಸಹಕಾರಿಯಾಗಲಿರುವ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನವನ್ನು ತಕ್ಷಣ ಆರಂಭಿಸಬೇಕು. ಆದಿಮ ಸಂಜಾತ ಕೊಡವರ ಮಾತೃಭೂಮಿ ಮತ್ತು ಸೂಕ್ಷ್ಮ ಬುಡಕಟ್ಟು ಜನಾಂಗದ ಹಕ್ಕುಗಳನ್ನು ಉಳಿಸಿಕೊಳ್ಳಲು ಪೂರಕವಾಗಿರುವ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ನ್ಯಾಯ ಸಮ್ಮತವಾದ 9 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಧರಣಿ ವೇಳೆ ಒತ್ತಾಯಿಸುವುದಾಗಿ ನಾಚಪ್ಪ ಹೇಳಿದ್ದಾರೆ.