ಸಾರಾಂಶ
ಗದಗ: ವಿದ್ಯಾರ್ಥಿಗಳು ಗುರಿಯನ್ನು ಹೊಂದಿರಬೇಕು, ಗುರುವಿನ ಮಾರ್ಗದರ್ಶನವನ್ನು ಪಡೆಯಬೇಕು. ವಿದ್ಯಾರ್ಥಿಗಳು ತಂದೆ-ತಾಯಿಗಳ ಆಶಯವನ್ನು ಈಡೇರಿಸುವಂತವರಾಗಬೇಕು. ಶ್ರದ್ಧೆ, ಪರಿಶ್ರಮ, ಹೆಚ್ಚಿನ ಓದು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಲು ಸಾಧ್ಯ ಹಾಗೂ ಇಂದಿನ ವಿದ್ಯಾರ್ಥಿ ಯುವಶಕ್ತಿಯೇ, ಮುಂದಿನ ರಾಷ್ಟ್ರದ ಶಕ್ತಿ ಇದನ್ನು ಅರಿತು ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡಬೇಕು ಎಂದು ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ.ರವಿ ಹೇಳಿದರು.
ನಗರದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಅಂಗವಾಗಿ ನಡೆದ ದೀಕ್ಷಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾನಿಧ್ಯ ವಹಿಸಿದ್ದ ಕಪ್ಪತ್ತಗುಡ್ಡದ ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಮಾತನಾಡಿ, ನಿಜವಾದ ಶಿಷ್ಯ ಜ್ಞಾನ, ಬೆಳಕು, ದಾರಿ, ಅರಿವನ್ನು ಹುಡುಕಿಕೊಂಡು ಬರುತ್ತಾರೆ. ಗುರು ಎಂದರೆ ಬೆಳಕು, ಗುರು ಎಂದರೆ ದಾರಿ, ಅಂತಹ ಗುರುಗಳಿಂದ ವಿದ್ಯೆ ಮತ್ತು ಕೌಶಲ್ಯವನ್ನು ಪಡೆದ ವಿದ್ಯಾರ್ಥಿಗಳು ಗ್ರಾಮ ಮತ್ತು ಸಮಾಜ ಕಟ್ಟುವ ದೀಕ್ಷಾರಂಭ ಇಂದಿನ ವಿದ್ಯಾರ್ಥಿಗಳಿಗೆ ಆಗಬೇಕಾಗಿದೆ ಎಂದರು.
ವಿವಿ ಕುಲಸಚಿವ ಪ್ರೊ. ಡಾ. ಸುರೇಶ್.ವಿ. ನಾಡಗೌಡರ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಕೋನವನ್ನು ಇಟ್ಟುಕೊಂಡು ಸ್ಥಾಪಿತವಾದ ವಿಶ್ವವಿದ್ಯಾಲಯ ಕನಸನ್ನು ಈಡೇರಿಸಲು ಕಳೆದ 7 ವರ್ಷಗಳ ಹಿಂದೆ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಡಾ. ಎಚ್.ಕೆ. ಪಾಟೀಲ ಅವರ ಆಶಯದಂತೆ ಈ ವಿಶ್ವವಿದ್ಯಾಲಯ ಎತ್ತರಕ್ಕೆ ಬೆಳೆಯುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.ವಿವಿ ಕುಲಪತಿ ಪ್ರೊ.ವಿಷ್ಣುಕಾಂತ್.ಎಸ್. ಚಟಪಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆಯನ್ನು ಮಾಡಿ, ಗ್ರಾಮಗಳ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಈ ವೇಳೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.ಸಂಯೋಜಕ ವಿಜಯಮಹಾಂತೇಶ ಕಣವಿ, ಡಾ. ದೀಪಾ ಪಾಟೀಲ, ಡಾ. ಲಿಂಗರಾಜ ನಿಡುವಣಿ ಸೇರಿ ವಿವಿ ಅಧಿಕಾರಿ ವರ್ಗ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.