ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 26 ರಂದು ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತಾರಾಷ್ಟ್ರೀಯ ಕಾನೂನು ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ವಿಕ್ರಮ್ ಹೆಗಡೆ ಅವರು ಕೊಡವ ಧಾರ್ಮಿಕ ಆಚರಣೆ, ಕೋವಿ-ತೋಕ್ ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ ಕುರಿತು ವಿಷಯ ಮಂಡಿಸಲಿದ್ದಾರೆ.ಸುಪ್ರೀಂಕೋರ್ಟ್ ಹಾಗೂ ನ್ಯೂಯಾರ್ಕ್‌ನ ವಕೀಲರಾದ ಹಿಮಾ ಲಾರೆನ್ಸ್ ವಿಕ್ರಮ್ ಹೆಗಡೆ ಅಂತಾರಾಷ್ಟ್ರೀಯ ವಿಶ್ವಸಂಸ್ಥೆಯ ಕಾನೂನಿನಡಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ ಮತ್ತು ಅದಿಮ ಸಂಜಾತ ಕೊಡವ ಜನಾಂಗೀಯ ಗುರುತು ವಿಷಯದ ಕುರಿತು ಮಾತನಾಡಲಿದ್ದಾರೆ. ಹಿರಿಯ ವಕೀಲ ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.ಕೊಡವ ಸಮುದಾಯದ ಸಾಂವಿಧಾನಿಕ ಭವಿಷ್ಯದ ಕುರಿತಾದ ಈ ವೈಚಾರಿಕ ವಿಚಾರಗೋಷ್ಠಿಯಲ್ಲಿ ಸರ್ವ ಕೊಡವರ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ರೆಸಾರ್ಟ್‌ ತೆರವುಗೊಳಿಸಲು ಒತ್ತಾಯ: ಕೊಡಗು ಜಿಲ್ಲೆಯ 300 ಗ್ರಾಮಗಳಲ್ಲಿ ತಲಾ 10 ರೆಸಾರ್ಟ್ಗಳು ತಲೆ ಎತ್ತಿವೆ, ಈ ರೆಸಾರ್ಟ್‌ಗಳಿಂದ ಕೊಡವಲ್ಯಾಂಡ್ ಗೆ ಅಪಾಯ ಕಾದಿದೆ. ಜನಸಂದಣಿಯನ್ನು ತಪ್ಪಿಸಿ ಈ ಪವಿತ್ರ ಭೂಮಿ ರಕ್ಷಿಸಿಕೊಳ್ಳಬೇಕಾದರೆ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು. ಹೋಂಸ್ಟೇ ಪರಿಕಲ್ಪನೆ ಕೊಡವ ಸಂಸ್ಕೃತಿಗೆ ಪೂರಕವಾಗಿದೆ, ಆದರೆ ರೆಸಾರ್ಟ್ ಪ್ರವಾಸೋದ್ಯಮದ ಚಿಂತನೆ ರಾಜ್ಯಕ್ಕೆ ಲಾಭ ಮಾಡಿಕೊಡುತ್ತದೆಯೇ ಹೊರತು ಕೊಡಗು ಜಿಲ್ಲೆಗೆ ಯಾವುದೇ ಲಾಭವಿಲ್ಲ. ರೆಸಾರ್ಟ್‌ ಗಳಲ್ಲಿ ತಂಗುವ ಪ್ರವಾಸಿಗರಿಗಾಗಿ ಮಿತಿ ಮೀರಿ ನೀರಿನ ಬಳಕೆಯಾಗುತ್ತಿದೆ, ಜಲಮೂಲಗಳಿಗೆ ಹಾನಿಯಾಗುತ್ತಿದೆ.

ಕೊಡಗಿನ ಅಸ್ತಿತ್ವ, ಪರಿಸರ ಮತ್ತು ಸಂಸ್ಕೃತಿಗೆ ದಕ್ಕೆ ಉಂಟು ಮಾಡುತ್ತಿರುವ ನಿಯಮ ಮೀರಿದ ರೆಸಾರ್ಟ್ಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಈ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ಬೃಹತ್ ಜನಜಾಗೃತಿ ಆಂದೋಲವನ್ನು ಆಯೋಜಿಸುವುದಾಗಿ ತಿಳಿಸಿದರು.