ಸಾರಾಂಶ
ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗುತ್ತಿರುವ ಸಹಕಾರಿ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡುವ ಮೂಲಕ ದುರ್ಬಲ ಮತ್ತು ರೈತಾಪಿ ವರ್ಗದವರ ಆರ್ಥಿಕ ಅಭಿವೃದ್ಧಿಯ ಕನಸಿಗೆ ಬೆನ್ನೆಲುಬಾಗಿ ಸಹಕರಿಸುತ್ತಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅಕ್ಕಿಆಲೂರು: ಗ್ರಾಮೀಣ ಭಾಗಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗುತ್ತಿರುವ ಸಹಕಾರಿ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡುವ ಮೂಲಕ ದುರ್ಬಲ ಮತ್ತು ರೈತಾಪಿ ವರ್ಗದವರ ಆರ್ಥಿಕ ಅಭಿವೃದ್ಧಿಯ ಕನಸಿಗೆ ಬೆನ್ನೆಲುಬಾಗಿ ಸಹಕರಿಸುತ್ತಿವೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ದಿ.ಹಾನಗಲ್ಲ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕ ಮಂಡಳಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಸ್ಥಾಪನೆಗೊಳ್ಳುವ ಸಹಕಾರಿ ಬ್ಯಾಂಕುಗಳು ರೈತವರ್ಗದವರ, ಮಧ್ಯಮ ಮತ್ತು ದುರ್ಬಲವರ್ಗದವರನ್ನು ಸಮಾಜಮುಖಿಯಾಗಿ ಮುನ್ನಡೆಸುವಲ್ಲಿ ಸಕಾರಾತ್ಮಕ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಆಧುನಿಕ ಜಗತ್ತಿನ ಬೇಡಿಕೆಗಳಿಗನುಸಾರವಾಗಿ ಸಾಲ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಸಹಕಾರಿ ಬ್ಯಾಂಕಗಳಲ್ಲಿ ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಹೆಚ್ಚಿನ ಸೇವೆ ಒದಗಿಸಲು ಅನುವು ಮಾಡಿಕೊಡುವುದು ಸದಸ್ಯರೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಪಿಕಾರ್ಡ್ ಬ್ಯಾಂಕಿನ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ಆಯ್ಕೆಯಾದ ಸದಸ್ಯರು ರೈತರಿಗೆ ಲಭ್ಯವಿರುವ ಅಗತ್ಯ ಸಾಲ ಸೌಕರ್ಯ ಒದಗಿಸುವಲ್ಲಿ ಸಫಲರಾಗಬೇಕು. ಎಲ್ಲರೊಟ್ಟಿಗೆ ಉತ್ತಮ ಒಡನಾಟದಿಂದ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು. ಬ್ಯಾಂಕಿನ ನೂತನ ಅಧ್ಯಕ್ಷ ಮಹೇಶ ಬಣಕಾರ ಮಾತನಾಡಿ, ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸುತ್ತ ಬ್ಯಾಂಕಿನ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತೇವೆ. ಲಭ್ಯವಿರುವ ಸಾಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಪದ್ಮಪ್ಪ ಮಂತಗಿ, ನಿರ್ದೇಶಕರಾದ ಎಚ್.ಸಿ. ಗೊಂದಿ, ರೇಣುಕಾ ಹಳ್ಳೂರ, ಶಿವಯೋಗಿ ಕಲ್ಲಾಪುರ, ಬಸವರಾಜ ದೊಡ್ಡವೀರಪ್ಪನವರ, ಕೃಷ್ಣ ಸವಣೂರು, ರುದ್ರಪ್ಪ ಸಂಕಣ್ಣನವರ, ನಿಂಗಪ್ಪ ಕಳಸಳ್ಳಿ, ಬಸವರಾಜ ತಳವಾರ, ಶಿವಲಿಂಗಪ್ಪ ಬೈಲಣ್ಣನವರ, ಪ್ರಭುದೇವ ಪಾಟೀಲ, ನೀಲವ್ವ ಕರಿಭೀಮಣ್ಣನವರ ಹಾಗೂ ಮುಖಂಡರಾದ ರಾಜಣ್ಣ ಗೌಳಿ, ಶಿವಲಿಂಗಪ್ಪ ತಲ್ಲೂರ, ಮಹೇಶ ಕಮಡೊಳ್ಳಿ, ಕಲ್ಯಾಣಕುಮಾರ ಶೆಟ್ಟರ, ಉದಯ ವಿರುಪಣ್ಣನವರ, ಶಿವಕುಮಾರ ದೇಶಮುಖ, ಸೇರಿದಂತೆ ಪ್ರಮುಖರು ಹಾಜರಿದ್ದರು.