ಸಹಕಾರ ಸಂಘಗಳು ಏಳ್ಗೆಗೆ ಗ್ರಾಹಕರ ವಿಶ್ವಾಸ ಅಗತ್ಯ: ಸರ್ವೋತ್ತಮ ಜಾರಕಿಹೊಳಿ

| Published : Sep 02 2024, 02:12 AM IST

ಸಹಕಾರ ಸಂಘಗಳು ಏಳ್ಗೆಗೆ ಗ್ರಾಹಕರ ವಿಶ್ವಾಸ ಅಗತ್ಯ: ಸರ್ವೋತ್ತಮ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘಗಳು ಜನರಿಂದ ಠೇವಣಿ ಸಂಗ್ರಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಎಂದಿಗೂ ಠೇವಣಿದಾರರ ವಿಶ್ವಾಸ ಕಳೆದುಕೊಳ್ಳಬಾರದು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಸಹಕಾರ ಸಂಘಗಳು ಜನರಿಂದ ಠೇವಣಿ ಸಂಗ್ರಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಎಂದಿಗೂ ಠೇವಣಿದಾರರ ವಿಶ್ವಾಸ ಕಳೆದುಕೊಳ್ಳಬಾರದು ಮತ್ತು ಪತ್ತಿನ ಸಹಕಾರ ಸಂಘಗಳು ಪ್ರಸ್ತುತ ದಿನಗಳಲ್ಲಿ ಬಹಳ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಪಟ್ಟಣ ಬಸವೇಶ್ವರ ಅರ್ಬನ್ ಸೊಸೈಟಿಯ ಸಭಾಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಪತ್ತಿನ (ಕ್ರೆಡಿಟ್) ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಏರ್ಪಡಿಸಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಬದಲಾಗುತ್ತಿರುವ ಕಾಯ್ದೆ ಕಾನೂನುಗಳ ಅಡಿಯಲ್ಲಿ, ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಯನಿರ್ವಹಿಸಿದರೆ ಎದುರಾಗುವ ಸಂಕಷ್ಟಗಳಿಂದ ಪಾರಾಗಬಹುದು. ಬಂಡವಾಳ ಹೆಚ್ಚಳವಾಗಿ ಸಹಕಾರ ಸಂಘಗಳು ಭದ್ರತೆಯಲ್ಲಿರುತ್ತವೆ. ಭದ್ರತೆ ಇಲ್ಲದಿದ್ದರೆ ಗ್ರಾಹಕರು ಸಂಘಗಳ ಜೊತೆ ವ್ಯವಹಾರ ಮಾಡಲು ಹಿಂಜರಿಯುತ್ತಾರೆ ಎಂದರು.

ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿಗಳ ಕುರಿತು ಮತ್ತು ಸಹಕಾರ ಸಂಘಗಳಲ್ಲಿ ಸಾಲ ವಿತರಣೆ ಮತ್ತು ಸಾಲ ವಸೂಲಾತಿ ಕುರಿತು. ಆಡಳಿತ ಮಂಡಳಿ ಸಭೆ ಹಾಗೂ ವಾರ್ಷಿಕ ಮಹಾಸಭೆ ಜರುಗಿಸುವ ವಿಧಾನಗಳ ಬಗ್ಗೆ ಸರಿಯಾಗಿ ಕಾರ್ಯನಿರ್ವಹಿಸಬೇಕು. ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ವರ್ಧಮಾನ ಬೋಳಿ ಮಾತನಾಡಿ, ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು ತರಬೇತಿ ಭಾಗವಹಿಸಿ ವಿಷಯ ಮನನ ಮಾಡಿಕೊಂಡು ಕಾರ್ಯನಿರ್ವಹಿಸುವ ಮೂಲಕ ಸಂಘದ ಏಳ್ಗೆಗೆ ಸಹಕಾರಿಯಾಲಿದೆ ಎಂದರು.

ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕ ಸಂಜಯ ಪಿ. ಹೊಸಮಠ ಮಾತನಾಡಿ, ಇತ್ತೀಚೆಗೆ ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿದ್ದು, ಎಲ್ಲ ಸಹಕಾರ ಸಂಘಗಳು ಆ ಬದಲಾವಣೆಗಳಿಗೆ ತಕ್ಕಂತೆ ತಮ್ಮ ಕಾರ್ಯ ಚಟುವಟಿಕೆಯಲ್ಲೂ ಬದಲಾವಣೆ ಮಾಡಿಕೊಂಡು ಸಂಘಗಳ ಬೆಳವಣಿಗೆ ಜೊತೆಗೆ ಗ್ರಾಹಕರ ಬೆಳವಣಿಗೆಗೂ ಶ್ರಮಿಸಬೇಕೆಂದರು.

ರಾಯಬಾಗ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶಂಕರ ಎಸ್. ಕರಬಸನ್ನವರ, ಸಹಕಾರ ಸಂಘಗಳ ಸಾಲ ವಿತರಣೆ ಮತ್ತು ಸಾಲ ವಸೂಲಾತಿ ಹಾಗೂ ಸಹಕಾರ ಸಂಘಗಳ ಚುನಾವಣೆ ಕುರಿತು, ಗೋಕಾಕದ ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ದಾಖಲೆಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಯಲ್ಲಿ ಕಂಡು ಬರುತ್ತಿರುವ ನೂನ್ಯತೆಗಳ ಕುರಿತು ತರಬೇತಿ ನೀಡಿದರು.

ವೇದಿಕೆಯಲ್ಲಿ ಮೇಲೆ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕರಾದ ಬಸಪ್ಪ ಸಂತಿ, ಶಿವಪ್ಪ ಮರ್ದಿ, ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ನಿರ್ದೇಶಕ ತಮ್ಮಣ್ಣ ಕೆಂಚರಡ್ಡಿ, ಬಸವೇಶ್ವರ ಅರ್ಬನ್ ಸೊಸಾಯಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ಇತರರು ಇದ್ದರು. ಜಿಲ್ಲಾ ಯೂನಿಯನ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪಾ ಜಗ್ಗಿನವರ ಸ್ವಾಗತಿಸಿ ವಂದಿಸಿದರು.