ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೃಷಿ ಪತ್ತಿನ ಸಹಕಾರ ಸಂಘಗಳು ರೈತರು, ಸಾರ್ವಜನಿಕರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವ ಕೆಲಸ ಮಾಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಚಿಕ್ಕಾಡೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ, ಪಡಿತರ ಆಹಾರ ಗೋದಾಮು ಹಾಗೂ ಸಭಾಂಗಣದ ಕಟ್ಟಡದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೃಷಿ ಸಾಲ ನೀಡುವುದರ ಜತೆಗೆ ರೈತರು, ಸಾರ್ವಜನಿಕರಿಗೆ ಚಿನ್ನಾಭರಣ ಸಾಲ, ಸಾಲ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ, ಮೈಕ್ರೋ ಫೈನಾನ್ಸ್‌ಗಳ ಹಾವಳಿಯನ್ನು ತಡೆಗಟ್ಟಬಹುದು ಎಂದರು.
ಸಹಕಾರ ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿಗಳು ಸಹಕರಿಸಬೇಕು, ಸಂಘಗಳಲ್ಲಿ ರಾಜಕೀಯ ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಘಗಳ ಅಭಿವೃದ್ಧಿಗೆ ಮುಂದಾಗಬೇಕು. ಚಿಕ್ಕಾಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ಆಡಳಿತ ಮಂಡಳಿಯಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಗ್ರಾಮಸ್ಥರು ಎಲ್ಲರೂ ಸೇರಿ ಕ್ರಮವಹಿಸುವ ಮೂಲಕ ಸರಿಪಡಿಸಿರುವುದು ಖುಷಿಯ ವಿಚಾರ. ಇದೇ ರೀತಿ ಷೇರುದಾರರು ಸಹಕಾರ ಸಂಘಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಚಿಕ್ಕಾಡೆ ಗ್ರಾಮದಲ್ಲಿ ಮುಂದಿನ ತಿಂಗಳು ಗ್ರಾಮದೇವತೆ ಹಬ್ಬ ನಡೆಯುವುದರಿಂದ ರಸ್ತೆ ಸರಿಪಡಿಸುವಂತೆ ಮನವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟನೆಗಳನ್ನು ನಿರ್ಮಿಸಿಕೊಂಡುವಂತೆ ಮನವಿ ಮಾಡಿದ್ದೀರಾ. ಅದರಂತೆ ರಸ್ತೆ ಅಭಿವೃದ್ಧಿ ಹಾಗೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಸಹಕಾರಿ ಕ್ಷೇತ್ರ ವಿಶಾಲವಾಗಿದೆ, ಈ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಚಿಕ್ಕಾಡೆ ಸಹಕಾರ ಸಂಘದ ಕಾರ್ಯ ನಿರ್ವಹಣೆ ಉತ್ತಮವಾಗದೆ. ಟಿಎಪಿಸಿಎಂಎಸ್‌ನಲ್ಲಿ ಜೆಡಿಎಸ್ ಆಡಳಿತ ಮಂಡಳಿ ಅಧಿಕಾರದಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅಧಿಕಾರಾವಧಿಯಲ್ಲಿ ಸಂಘದ ಬೆಳವಣಿಗೆ ಸಹಕಾರ ಉತ್ತಮವಾದ ಸಹಕಾರ ನೀಡಿದ್ದಾರೆ ಎಂದರು.ಅದೇ ರೀತಿ ನಮ್ಮ ಆಡಳಿತ ಮಂಡಳಿ ಬಟ್ಟೆ ಶಾಖೆ, ವಾಣಿಜ್ಯ ಮಳಿಗೆಗಳು, ವೇಬ್ರಿಡ್ಜ್ ಸೇರಿದಂತೆ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ್ದೇವೆ. ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರಿಸಲು ಕಟ್ಟಡ ಹುಡುಕಾಟ ನಡೆಸುತ್ತಿದ್ದಾರೆ. ಶಾಸಕರು ಸಬ್ ರಿಜಿಸ್ಟರ್ ಕಚೇರಿಯನ್ನು ಟಿಎಪಿಸಿಎಂಎಸ್ ಸಂಸ್ಥೆಗೆ ಸ್ಥಳಾಂತರಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಆಗಮಿಸಿ ಸಹಕಾರ ಸಂಘದ ಪಡಿತರ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಶುಭಹಾರೈಸಿ ಕಾರ್‍ಯನಿಮಿತ್ತ ತೆರಳಿದ್ದರು. ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಸವೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ್, ಗ್ರಾಪಂ ಅಧ್ಯಕ್ಷೆ ಅಕ್ಷತ, ಸಂಘದ ಅಧ್ಯಕ್ಷ ಸಿ.ವಿ.ರವೀಂದ್ರಸ್ವಾಮಿ, ಉಪಾಧ್ಯಕ್ಷ ಸ್ವಾಮಿ, ನಿರ್ದೇಶಕರಾದ ಸಿ.ಪಿ.ಪ್ರಕಾಶ್, ಜಗದೀಶ್, ಸುಶೀಲಮ್ಮ, ಪುಷ್ಪಲತಾ, ಆರ್.ದಿಲೀಪ್, ಸಿ.ಕೆ.ಅಂಕಯ್ಯ, ಎಸ್.ಕೆ.ಸುರೇಶ್, ಕಾರ್‍ಯದರ್ಶಿ ಡಿ.ರಜಿನಿ, ಹಿರಿಯ ಮುಖಂಡರಾದ ಡಿ.ಕೆ.ದೇವೇಗೌಡ, ರಾಮಕೃಷ್ಣೇಗೌಡ, ಮಹೇಶ್, ಸಿ.ಎಂ.ಕೃಷ್ಣೇಗೌಡ, ಸೇರಿ ಚಿಕ್ಕಾಡೆ, ದೇವೇಗೌಡನಕೊಪ್ಪಲು ಗ್ರಾಮದ ಯಜಮಾನರು, ಮುಖಂಡರು ಹಾಜರಿದ್ದರು.