ಸಹಕಾರ ಸಂಘಗಳು ಘಟಕಗಳಾಗಿ ಕಾರ್ಯನಿರ್ವಹಿಸಬೇಕು

| Published : Jan 23 2025, 12:50 AM IST

ಸಾರಾಂಶ

Co-operative societies should function as units

-ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಲೋಕಪ್ಪಗೌಡ ಸಲಹೆ । ಆಯ್ದ ಪತ್ತಿನ ಸಹಕಾರ ಸಂಘಗಳ ಸಿಇಒಗಳಿಗೆ ವಿಶೇಷ ತರಬೇತಿ

------

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕೃಷಿಯೇತರ ಸಹಕಾರ ಸಂಘಗಳ ಆಡಳಿತವು ಸದಸ್ಯರ ಆರ್ಥಿಕ ಹಿತಾಸಕ್ತಿ ಕಾಪಾಡುವ ಜೊತೆಗೆ ಘಟಕಗಳಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಹ ಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಆಯ್ದ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಬೇಕಾದರೆ ಪಾರದರ್ಶಕತೆ, ವೃತ್ತಿಪರತೆ, ಪರಿಣಾಮಕಾರಿ ಲೆಕ್ಕಪರಿಶೋಧನೆ ಮಾಹಿತಿ ಹೊಂದಿರುವ ಜೊತೆಗೆ ತಂತ್ರಜ್ಞಾನ ಹಾಗೂ ಲಾಭದಾಯಕವಾಗಿರುವ ಅಂಶಗಳನ್ನು ಒಳಗೊಂಡಿರಬೇಕು ಎಂದು ತಿಳಿಸಿದರು.

ಸಂಘಗಳು ಆಧ್ಯಾತ್ಮಿಕ ಕಾರ್ಯಗಳೊಡನೆ ಹಣಕಾಸಿನ ವ್ಯವಹಾರ ಹಾಗೂ ವಹಿವಾಟುಗಳಿಗೆ ಗಮನಹರಿಸಬೇಕು. ಸಹಕಾರ ಸಂಘಗಳ ಕೇಂದ್ರಬಿಂದು ಆರ್ಥಿಕ ಚಟುವಟಿಕೆಗಳು ಎಂದ ಅವರು, ಠೇವಣಿ, ಸಾಲ ವಿತರಣೆ, ಹೂಡಿಕೆ ಹಾಗೂ ಸೇವಾ ನಿಯಮಗಳನ್ನು ಕಾಲ ಕಾಲಕ್ಕೆ ತಕ್ಕಂತೆ ರೂಪಿಸಿ ಅನುಷ್ಠಾ ನಕ್ಕೆ ತರುವುದು ಅವಶ್ಯ ಎಂದು ಹೇಳಿದರು.

ಬೆಂಗಳೂರು ಸಹಕಾರ ಸಂಘಗಳ ಅಪರ ನಿಬಂಧಕ ಹೆಚ್.ಎಸ್.ನಾಗರಾಜಯ್ಯ ಉಪನ್ಯಾಸ ನೀಡಿ, ಸಹಕಾರಿ ಸಂಸ್ಥೆಯು ಸದಸ್ಯರು ಆರ್ಥಿಕ ಹಿತಾಸಕ್ತಿ ಕಾಪಾಡುವುದೇ ಮೂಲ ಆಶಯವಾಗಬೇಕು. ಲೇವಾದೇವಿ ಅಥವಾ ಖಾಸಗಿ ಫೈನಾನ್ಸ್‌ಗಳಿಗೆ ಸದಸ್ಯರು ಒಳಗಾಗದಂತೆ ಸಂಘದಿಂದಲೇ ಹಸನುಗೊಳಿಸಲು ಮುಂದಾಗಬೇಕು ಎಂದರು.

ಸಹಕಾರಿ ಕ್ಷೇತ್ರದ ಸದಸ್ಯರು ವಾರ್ಷಿಕ ಸಭೆಗೆ ಗೈರು, ಖಾತೆ ವಹಿವಾಟು ಹಾಗೂ ಸದಸ್ಯರು ಆಯ್ಕೆ ವಿಚಾರದಲ್ಲಿ ಪೂರ್ಣ ಪ್ರಮಾಣ ಹಿಂದುಳಿದಿರುವ ಕಾರಣ ಅನೇಕ ಸವಾಲು ಎದುರಿಸುತ್ತಿವೆ. ಹೀಗಾಗಿ ಆಡಳಿತ ವರ್ಗವು ಸದಸ್ಯರಿಗೆ ಜಾಗೃತಿ ಮೂಡಿಸಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರೆ ಸಹಕಾರಿ ಕ್ಷೇತ್ರ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.

ಕೃಷಿ ಪತ್ತಿನ ಸಂಘಗಳಿಗೆ ಸರ್ಕಾರ ಷೇರು ಹೂಡಿಕೆ ಮಾಡುತ್ತವೆ. ಕೃಷಿಯೇತರ ಬ್ಯಾಂಕ್‌ಗಳಲ್ಲಿ ಸದಸ್ಯರಿಂದಲೇ ಬೆಳವಣಿಗೆ ಹೊಂದಬೇಕು. ಆ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆ, ಆಡಳಿತಾತ್ಮಕ ಚುರುಕು ಅತ್ಯಂತ ಅವಶ್ಯಕ. ಸದಸ್ಯರುಗಳಲ್ಲಿ ಠೇವಣಿ ಇರಿಸಲು ಸಂಘಗಳು ನಂಬಿಕೆ ಮೂಡಿಸಿದರೆ ಸಂಪನ್ಮೂಲ ತಾನಾಗಿಯೇ ಹರಿದುಬರಲಿದೆ ಎಂದು ಹೇಳಿದರು.

ತರಬೇತಿದಾರ ಆರ್.ಕೆ.ಬಾಲಚಂದ್ರ ಮಾತನಾಡಿ, ಗ್ರಾಹಕರು ಸಂಘಗಳ ವ್ಯವಹಾರವನ್ನು ಎಲ್ಲರೊಂದಿಗೆ ಹಂಚದೇ ಗೌಪ್ಯತೆ ಕಾಪಾಡಬೇಕು ಎಂದರು.

ಗ್ರಾಹಕರು ಸಣ್ಣಪುಟ್ಟ ವಹಿವಾಟು ಆನ್‌ಲೈನ್‌ನಲ್ಲಿ ನಡೆಸುತ್ತಿರುವುದು ಸಂತಸ. ಆದರೆ, ಕೆಲವು ಸಾಮಾಜಿಕ ಜಾಲತಾಣದಲ್ಲಿ ವಂಚಿಸುವ ಪ್ರಕರಣಗಳು ಹೆಚ್ಚಿರುವ ಕಾರಣ ಸುರಕ್ಷತಾ ಕಾಳಜಿ ವಹಿಸಬೇಕು. ಗ್ರಾಹಕರ ಸಂಖ್ಯೆ, ಓಟಿಪಿ ಅಥವಾ ಇನ್ಯಾವುದೇ ವ್ಯವಹಾರದ ಮಾಹಿತಿಯನ್ನು ಹಂಚಿಕೊಳ್ಳದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಎಸ್. ಮಹಾಬಲ, ಪ್ರಸ್ತುತ ಸಹಕಾರಿ ಕ್ಷೇತ್ರವು ಸಂದಿಗ್ಧ ಪರಿಸ್ಥಿತಿ ಮತ್ತು ಗೊಂದಲದಲ್ಲಿದೆ. ಹೀಗಾಗಿ ಸಹಕಾರಿ ಮಹಾಮಂಡಲದಿಂದ ನಿರ್ದೇಶಕರು, ಸಿಇಒ ಗಳಿಗೆ ಮಾಹಿತಿ ಕೊರತೆ ಕಾರಣ ರಾಜ್ಯಾದ್ಯಂತ ತರಬೇತಿ ಕೈಗೊಂಡು ಸಹಕಾರಿ ತತ್ವದ ನಿಯಮ ಬೋಧಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ.ದಿವಾಕರ್, ನಿರ್ದೇಶಕರಾದ ಜಿ.ವಿ.ಮೋಹನ್, ವರಸಿದ್ದಿ ವೇಣುಗೋಪಾಲ್, ಸಹಕಾರಿ ಅಭಿವೃದ್ಧಿ ಅಧಿಕಾರಿ ರುಕ್ಮೀಣಿ, ಸಿಬ್ಬಂದಿಗಳಾದ ಇಂದ್ರೇಶ್, ಯಶಸ್ ಉಪಸ್ಥಿತರಿದ್ದರು.

-----

ಪೋಟೋ: ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಆಯ್ದ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿ ಮತ್ತು ಸಿಇಒಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಬಿ.ಸಿ.ಲೋಕಪ್ಪಗೌಡ ಅವರು ಉದ್ಘಾಟಿಸಿದರು. ಜಿ.ಎಸ್‌. ಮಹಾಬಲ, ವರಸಿದ್ಧಿ ವೇಣುಗೋಪಾಲ್‌, ಜಿ.ಕೆ. ದಿವಾಕರ್‌ ಇದ್ದರು.

ಫೈಲ್‌ ನೇಮ್‌ 22 ಕೆಸಿಕೆಎಂ 1