ಸಹಕಾರಿ ಸಂಸ್ಥೆ ರೈತರಿಗಾಗಿ ಕೆಲಸ: ಸಹಕಾರ ಸಚಿವ ಕೆ.ಎನ್.ರಾಜಣ್ಣ

| Published : Dec 05 2024, 12:32 AM IST

ಸಹಕಾರಿ ಸಂಸ್ಥೆ ರೈತರಿಗಾಗಿ ಕೆಲಸ: ಸಹಕಾರ ಸಚಿವ ಕೆ.ಎನ್.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಕೃಷಿ ಕ್ಷೇತ್ರ ಹೊರತು ಪಡಿಸಿ ಇತರ ಎಲ್ಲಾ ಉತ್ಪಾದಕ ಕ್ಷೇತ್ರಗಳಲ್ಲಿಯೂ ಉತ್ಪಾದಕನೇ ತನ್ನ ವಸ್ತುವಿನ ಬೆಲೆ ನಿಗದಿ ಪಡಿಸುತ್ತಾನೆ. ಆದರೆ, ರೈತರು ಮಾತ್ರ ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಪಡಿಸುವ ವ್ಯವಸ್ತೆ ರೂಪುಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರೈತರು ತಾವು ಬೆಳೆದು ಮಾರಾಟ ಮಾಡುವ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿ ಮಾಡುವ ವ್ಯವಸ್ಥೆ ರೂಪುಗೊಳ್ಳುವುದಿಲ್ಲವೋ ಅಲ್ಲಿಯವರೆಗೂ ಸಹಕಾರಿ ಸಂಸ್ಥೆ ರೈತರಿಗಾಗಿ ಕೆಲಸ ಮಾಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಸಿಎಂ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕೃಷಿ ಕ್ಷೇತ್ರ ಹೊರತು ಪಡಿಸಿ ಇತರ ಎಲ್ಲಾ ಉತ್ಪಾದಕ ಕ್ಷೇತ್ರಗಳಲ್ಲಿಯೂ ಉತ್ಪಾದಕನೇ ತನ್ನ ವಸ್ತುವಿನ ಬೆಲೆ ನಿಗದಿ ಪಡಿಸುತ್ತಾನೆ. ಆದರೆ, ರೈತರು ಮಾತ್ರ ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಪಡಿಸುವ ವ್ಯವಸ್ತೆ ರೂಪುಗೊಂಡಿಲ್ಲ ಬೇಸರ ವ್ಯಕ್ತಪಡಿಸಿದರು.ಜನರಿಗೆ ಉತ್ತಮ ಜೀವನ ಕಲ್ಪಿಸುವ ಎಲ್ಲಾ ಕೆಲಸಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ. ಪಟ್ಟಣದ ಕಸಬಾ ಪತ್ತಿನ ಸಹಕಾರ ಸಂಘ ಕಳೆದ 50 ವರ್ಷಗಳಿಂದ ಈ ಭಾಗದ ರೈತಾಪಿ ಜನರಿಗೆ ಸೇವೆ ನೀಡುತ್ತಿದೆ. ಈ ಸಹಕಾರ ಸಂಘ ಸ್ವಂತ ಕಟ್ಟಡ ಹೊಂದಲು ಅಗತ್ಯ ನಿವೇಶನಗಳನ್ನು ನೀಡಿದ ದಿ.ಕೆ.ಎನ್.ಕೆಂಗೇಗೌಡರ ಹೆಸರಿನಲ್ಲಿ ಸಭಾ ಭವನ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮಗಾಗಿ ಎಲ್ಲರೂ, ಎಲ್ಲರಿಗಾಗಿ ನಾವು ಎನ್ನುವುದು ನಮ್ಮ ಸಹಕಾರ ತತ್ವದ ಮೂಲ ಧ್ಯೇಯ. ರೈತರು ಆರ್ಥಿಕವಾಗಿ ಸಧೃಡರಾಗಲು, ಸ್ವಾಭಿಮಾನದ ಬದುಕು ಸಾಗಿಸಲು ಸಹಕಾರ ಸಂಘ ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಜನರ ಅರ್ಥಿಕ ಚಟುವಟಿಕೆ ಹೆಚ್ಚಿಸುವ ಕಾರಣಕ್ಕಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ ಹೈನುಗಾರಿಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದರು.

ಸಹಕಾರ ಸಂಘಗಳು ಜಾತಿ ಮತ್ತು ಧರ್ಮಗಳಿಂದ ದೂರವಿರಬೇಕು. ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಸಂಘಗಳ ಸದಸ್ಯತ್ವ ಪಡೆಯಬೇಕು. ಸವಲತ್ತು ಪಡೆಯದವರನ್ನು ಗುರುತಿಸಿ ಸಹಕಾರ ಸಂಘಗಳು ಸಾಲ ಸೌಲಭ್ಯ ಮತ್ತಿತರ ಸೌಲಭ್ಯಗಳನ್ನು ರೈತ ಸಮುದಾಯಕ್ಕೆ ನೀಡಬೇಕು ಎಂದರು.

ಸಾಲಮನ್ನಾ ಮಾಡಿದ ನಂತರ ಸಾಲ ಪಡೆದವರಿಗೆ ಮತ್ತೆ ಮತ್ತೆ ಸಾಲ ನೀಡಲಾಗುತ್ತಿದೆ. ಇದುವರೆಗೂ ಸಾಲ ಪಡೆಯದ ರೈತರನ್ನು ಗುರುತಿಸಿ ಅವರಿಗೂ ಸಾಲ ನೀಡುವ ಕೆಲಸವನ್ನು ಪತ್ತಿನ ಸಹಕಾರ ಸಂಘಗಳು ಮಾಡಬೇಕು ಎಂದರು.

ಇದೇ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ತಾಲೂಕಿನ ಜನತೆಯ ಪರವಾಗಿ ಬೇಡಿಕೆ ಪಟ್ಟಿ ಸಲ್ಲಿಸಿದರು.