ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಮಲೆನಾಡಿನ ಬಳಿಕ ಈಗ ಕರಾವಳಿಯಲ್ಲಿ ಅಡಕೆ ತೋಟಗಳಿಗೆ ನುಸಿ ಪೀಡೆ ಕಾಲಿರಿಸಿದೆ. ಈ ಹಿಂದೆ ಬೇಸಗೆಯಲ್ಲಿ ಮಲೆನಾಡು ಪ್ರದೇಶಗಳ ಅಡಕೆ ತೋಟಗಳಲ್ಲಿ ನುಸಿ ಪೀಡೆ ಬಾಧೆ ಕಾಣಿಸುತ್ತಿತ್ತು. ಈ ಬಾರಿ ಕರಾವಳಿಯಲ್ಲಿ ದ.ಕ. ಜಿಲ್ಲೆಯ ಅಡಕೆ ತೋಟಗಳಿಗೆ ನುಸಿ ಪೀಡೆ ಲಗ್ಗೆ ಇರಿಸಿದೆ.
ಕಳೆದ ಒಂದು ತಿಂಗಳಿಂದ ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ ಭಾಗಗಳ ಅಡಕೆ ತೋಟಗಳಲ್ಲಿ ಅಡಕೆ ಸೋಗೆ ದಿಢೀರ್ ಒಣಗುತ್ತಿದೆ. ಬಳಿಕ ಸೋಗೆ ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿ ಒಂದೆರಡು ದಿನದಲ್ಲಿ ಸಾಯುತ್ತದೆ. ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಫಸಲು ನಷ್ಟ ಭೀತಿ ಅಡಕೆ ಬೆಳೆಗಾರರನ್ನು ಆವರಿಸಿದೆ.ಅಧಿಕ ಉಷ್ಣಾಂಶ ಕಾರಣ:
ಕರಾವಳಿಯಲ್ಲಿ ಇಲ್ಲಿವರೆಗೆ ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಕಾಣಿಸುವ ಮಳೆ ಈ ಬಾರಿ ಬಂದಿಲ್ಲ. ಅಧಿಕ ಉಷ್ಣಾಂಶದಿಂದ ಈ ನುಸಿ ಪೀಡೆ ಅಡಕೆ ತೋಟಗಳಿಗೆ ವಕ್ಕರಿಸಿದೆ. ಇದಕ್ಕೆ ಮಳೆ ಪರಿಹಾರವಾದರೂ ತಕ್ಷಣಕ್ಕೆ ನುಸಿ ಪೀಡೆ ಹತೋಟಿ ಅತ್ಯಗತ್ಯ. ಇದಕ್ಕಾಗಿ ಔಷಧ ಸಿಂಪರಣೆ ಅತೀ ಮುಖ್ಯ. ಮಳೆ ಬಂದಿಲ್ಲ, ನೀರಿಲ್ಲ ಎಂದು ನುಸಿ ಪೀಡೆ ಬಾಧೆಯನ್ನು ನಿರ್ಲಕ್ಷಿಸಿದರೆ ಇಡೀ ತೋಟಕ್ಕೆವ್ಯಾಪಿಸಿ ತೊಂದರೆಯಾದೀತು ಎನ್ನುವುದು ಕೃಷಿ ವಿಜ್ಞಾನಿಗಳ ಸಲಹೆ.ಸುಳ್ಯದಲ್ಲಿ ಹೆಚ್ಚಳ:
ಈಗಾಗಲೇ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿ ರೋಗ ಬಾಧಿತ ಸುಳ್ಯ ಪ್ರದೇಶದಲ್ಲೇ ನುಸಿ ಪೀಡೆ ಬಾಧೆ ಕೂಡ ಅಧಿಕವಾಗಿ ಕಾಣಿಸತೊಡಗಿದೆ. ಆದರೆ ತೋಟಗಾರಿಕಾ ಇಲಾಖೆಗೆ ಇದುವರೆಗೆ ಮಾಹಿತಿ ಲಭಿಸಿಲ್ಲ.ಪುತ್ತೂರಿನ ಪಾಣಾಜೆ ಗಡಿಭಾಗಗಳಲ್ಲಿ, ಸುಳ್ಯದ ಮರ್ಕಂಜ, ಪಂಜ ಮತ್ತಿತರ ಕಡೆಗಳಲ್ಲಿ ಅಡಕೆ ತೋಟಗಳು ನುಸಿ ಪೀಡೆ ಬಾಧೆಗೆ ಒಳಗಾಗಿವೆ. ಇಲ್ಲಿ ಮಂಗಳವಾರ ಮತ್ತು ಬುಧವಾರ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ನಾನು ಮೂರು ವರ್ಷ ಹಿಂದೆ ಹಳದಿ ರೋಗ ಕಾರಣ ಅಡಕೆ ತೋಟ ಕಡಿದಿದ್ದೆ. ಈಗ ಹೊಸ ಅಡಕೆ ತೋಟದಲ್ಲಿ 1,200 ಗಿಡಗಳಿಗೆ ನುಸಿ ಪೀಡೆ ಬಾಧಿಸಿದೆ. ಆರಂಭದಲ್ಲಿ ಇದು ಹಳದಿ ರೋಗ ಮತ್ತೆ ಕಾಣಿಸಿದೆ ಎಂದು ಭಾವಿಸಿದ್ದೆ. ಆದರೆ ಇದು ಬೇರೆಯೇ ಎಂದು ಗೊತ್ತಾಯಿತು. ಬಳಿಕ ಇಂದೋರ್‌ನ ಕೃಷಿ ಸಂಶೋಧನಾ ಪ್ರಯೋಗಾಲಯದಿಂದ ತೋಟಗಾರಿಕಾ ಔಷಧ ತರಿಸಿ ಸಿಂಪಡಿಸಿದ್ದೇನೆ. ಸದ್ಯ ನುಸಿ ಪೀಡೆ ಬಾಧೆ ಹತೋಟಿಯಲ್ಲಿದೆ ಎನ್ನುತ್ತಾರೆ ಪಂಜಬೀಡು ಪ್ರಗತಿಪರ ಕೃಷಿಕ ರಜಿತ್ ಭಟ್.ಕರ್ನಾಟಕ-ಕೇರಳ ಗಡಿ ಭಾಗಗಳ ಅಡಕೆ ತೋಟಗಳಲ್ಲೂ ಇದೇ ಮಾದರಿಯ ನುಸಿ ಪೀಡೆ ಬಾಧೆ ಕಾಣಿಸಿದೆ. ಪಾಣಾಜೆಯ ಗಡಿ ಪ್ರದೇಶಗಳಲ್ಲಿ ಅಡಕೆ ತೋಟದಲ್ಲಿ ಹಠಾತ್ತನೆ ಸೋಗೆ ಅರಸಿನ ಬಣ್ಣಕ್ಕೆ ತಿರುಗಿ ಸಾಯುತ್ತದೆ. ಇದು ತೀವ್ರತೆ ಆದಷ್ಟು ತೋಟಕ್ಕೆ ಹಾನಿ ಜಾಸ್ತಿ. ಬಿಸಿಲ ಧಗೆ ಎಂದು ಇದನ್ನು ಬೆಳೆಗಾರರು ನಿರ್ಲಕ್ಷಿಸಬಾರದು. ಪತ್ರಹರಿತ್ತು ನಾಶವಾಗಿ ಸೋಗೆ ಸಾಯಲು ಕಾರಣವಾಗುತ್ತದೆ. ನನ್ನ ಅಡಕೆ ತೋಟದಲ್ಲಿ ನೂರು ಮರಗಳಿಗೆ ಈ ರೀತಿ ಹಾನಿಯಾಗಿದೆ ಎನ್ನುತ್ತಾರೆ ಕೃಷಿ ತಜ್ಞ ಡಾ.ಶ್ರೀಪಡ್ರೆ.
ನುಸಿ ಪೀಡೆ ಬಾಧೆ ನಿಯಂತ್ರಣ ಹೀಗೆನುಸಿ ಪೀಡೆ ಬಾಧಿತ ನಮ್ಮ ಅಡಕೆ ತೋಟಕ್ಕೆ ಇಂದೋರ್‌ನ ಕೃಷಿ ಪ್ರಯೋಗಾಲಯದ ಸಲಹೆ ಮೇರೆಗೆ ತಲಾ 50 ಗ್ರಾಂ ಯೂರಿಯಾ, ಪೊಟೇಷ್ ಪ್ರತಿ ಸಸಿಗೆ ನೀಡಲಾಗಿದೆ. 1 ಬ್ಯಾರಲ್ ನೀರಿಗೆ 400 ಮಿಲಿ ಲೀಟರ್ ನಿಂಬಿಸಿಡಿನ್, 500 ಎಂಎಲ್ ಒಮಿಟೆ, 1 ಕಿಲೋ ಮೆಗ್ನೇಮ್, 40 ಎಂಎಲ್ ಸುಪರ್ ಸ್ಟಿಕ್ ಇನ್ ಹಾಕಿ ಸಂಜೆ ಹೊತ್ತಿಗೆ ಇಡೀ ಎಲೆಗೆ ಕವರ್ ಮಾಡುವಂತೆ(ಎಲೆಯ ಮೇಲ್ಮೈ ಹಾಗೂ ಕೆಳಗೆ) ಸಿಂಪರಣೆ ಮಾಡಿದ್ದೇನೆ. ಸದ್ಯ ನಿಯಂತ್ರಣದಲ್ಲಿದೆ ಎನ್ನುವುದು ಕೃಷಿಕ ರಜಿತ್ ಭಟ್ ಅನುಭವ.
ಅಧಿಕ ತಾಪಮಾನದಿಂದ ಅಡಕೆ ತೋಟಗಳಲ್ಲಿ ನುಸಿ ಪೀಡೆ ಬಾಧೆ ಕಂಡುಬರುತ್ತಿದೆ. ಅಡಕೆ ಸೋಗೆಯ ತೇವಾಂಶವನ್ನು ನುಸಿ ಹೀರಿಕೊಳ್ಳುವುದರಿಂದ ಸೋಗೆ ಸೊರಗಿ ಸಾಯುವ ಹಂತ ತಲಪುತ್ತದೆ. ಮೇಲ್ನೋಟಕ್ಕೆ ಹಳದಿ ಎಲೆರೋಗ, ಎಲೆ ಚುಕ್ಕಿರೋಗದಂತೆ ಕಂಡುಬಂದರೂ ಇದು ಅದಲ್ಲ. ಇದರ ನಿಯಂತ್ರಣಕ್ಕೆ ಬೆಳೆಗಾರರಿಗೆ ಸೂಕ್ತ ಔಷಧ ಸಿಂಪರಣೆಗೆ ಶಿಫಾರಸು ಮಾಡಲಾಗಿದೆ. ಅಲ್ಲದೆ ನುಸಿ ಪೀಡೆ ಬಾಧಿತ ತೋಟಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಲಿದೆ ಎಂದು ಮುಖ್ಯಸ್ಥ, ಸಿಪಿಸಿಆರ್‌ಐ ಕಾಸರಗೋಡು ಸಸ್ಯಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಹೆಗಡೆ ಹೇಳುತ್ತಾರೆ.