ಸಾರಾಂಶ
ಹುಬ್ಬಳ್ಳಿ: ದೇಶದ ಸಂಸ್ಕೃತಿ, ಪರಂಪರೆ ಎತ್ತಿಹಿಡಿಯುವಲ್ಲಿ ಕರಾವಳಿ ಭಾಗದ ಜನ ಸದಾ ಮುಂದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ಕಲ್ಲೂರ ಲೇಔಟ್‌ನಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಆಯೋಜಿಸಿದ್ದ 3 ದಿನಗಳ ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕರಾವಳಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಅಲ್ಲಿನ ಸಂಸ್ಕೃತಿ, ಸ್ವಭಾವ, ನಡವಳಿಕೆ ಎಲ್ಲವೂ ಭಿನ್ನ. ಬುದ್ಧಿವಂತರ ಮತ್ತು ಜಾಣ್ಮೆ ಹೊಂದಿದವರ ನಾಡು ಕರಾವಳಿ. ಕರಾವಳಿ ಭಾಗದ ಜನರೇ ಸೇರಿ ಇಂತಹ ಕಾರ್ಯಕ್ರಮ ಸಂಘಟಿಸಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶ, ಜಗತ್ತಿನೆಲ್ಲೆಡೆ ಕರಾವಳಿ ಭಾಗದ ಅದರಲ್ಲೂ ಉಡುಪಿ ಮತ್ತು ಮಂಗಳೂರಿನ ಜನ ಹೋಟೆಲ್ ಸೇರಿ ವಿವಿಧ ಉದ್ಯಮಗಳಲ್ಲಿ ತಮ್ಮ ಜಾಣ್ಮೆ ಮತ್ತು ನಿರಂತರ ಶ್ರಮದಿಂದ ಹೆಸರು ಮಾಡಿದ್ದಾರೆ. ಬೇರೆಯವರಿಗೂ ಮಾರ್ಗದರ್ಶನ ಮಾಡುತ್ತ ಎಲ್ಲರನ್ನೂ ಜತೆಗೆ ಕೊಂಡೊಯ್ಯುತ್ತಿರುವ ಸಮುದಾಯದ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದರು.ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಕರಾವಳಿ ಭಾಗದ ವಿದ್ಯಾರ್ಥಿಗಳ ಸಾಧನೆ ಪ್ರಶಂಸಿಸಿದ ಅವರು ನಮ್ಮವರೂ ಕರಾವಳಿ ಭಾಗದಲ್ಲಿ ಶಿಕ್ಷಣ ಪಡೆದು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘದ ಜಿಲ್ಲಾಧ್ಯಕ್ಷ ವಿಜಯಾನಂದ ಶೆಟ್ಟಿ ಮಾತನಾಡಿ, ಕರಾವಳಿಯನ್ನೇ ಹುಬ್ಬಳ್ಳಿಯಲ್ಲಿ ತಂದ ಕಾರ್ಯಕ್ರಮದ ಸಂಘಟಕರ ಕಾರ್ಯ ಶ್ಲಾಘಿಸಿದರು.ಇದೇ ವೇಳೆ ಕುದ್ರೋಳಿ ಗಣೇಶ ಅವರಿಂದ ವಿಸ್ಮಯ ಜಾದೂ ಹಾಗೂ ಪಿಲಿ ಡ್ಯಾನ್ಸ್ ನೆರೆದಿದ್ದವರ ಮನರಂಜಿಸಿತು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಕಾರ್ಯದರ್ಶಿ ಶೈಲಜಾ ಬಗರೆ, ಶಶಿಮಂಗಲಾ ಐತಾಳ ಸೇರಿದಂತೆ ಮತ್ತಿತರರಿದ್ದರು.