ಸಾರಾಂಶ
ಹುಬ್ಬಳ್ಳಿ: ಕರಾವಳಿ ಎಂದಾಕ್ಷಣ ನೆನಪಾಗುವುದು ಸಮುದ್ರ ಮತ್ತು ಅಲ್ಲಿನ ಜನರ ಜೀವನಶೈಲಿ. ಭಾರತದಲ್ಲಿ 7500 ಕಿ.ಮೀ. ಕರಾವಳಿ ತೀರವಿದ್ದರೆ, ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡು 320 ಕಿ.ಮೀ. ಕರಾವಳಿ ತೀರವಿದೆ. ಇದು ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದು ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ಹೊಸೂರಿನ ಕಲ್ಲೂರ ಲೇಔಟ್ ಮೈದಾನದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಮತ್ತು ಇನ್ನರ್ವ್ಹಿಲ್ ಕ್ಲನ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಕರಾವಳಿ ಉತ್ಸವವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ, ಸಿನಿಮಾ, ಪತ್ರಿಕೆ, ಬ್ಯಾಂಕಿಂಗ್, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕ್ಷೇತ್ರಕ್ಕೆ ಕರಾವಳಿ ಭಾಗದ ಜನರು ಕೊಡುಗೆ ಬಹು ದೊಡ್ಡದಿದೆ. ಕರಾವಳಿ ತೀರ ಎಂದರೆ ಸಾಂಸ್ಕೃತಿಕ ಸಮ್ಮಿಲನ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಪ್ರಪಂಚದ ಎಲ್ಲ ಮೂಲೆಯಲ್ಲೂ ಮತ್ತು ಎಲ್ಲ ಕ್ಷೇತ್ರದಲ್ಲೂ ಬಂಟ್ ಸಮುದಾಯವಿದೆ. ದೇಶದ ವ್ಯವಸ್ಥೆ, ಸಮಾಜದ ಏಳ್ಗೆಯಲ್ಲಿ ಕರಾವಳಿ ತೀರದ ಜನರ ಕೊಡುಗೆ ಸಾಕಷ್ಟಿದೆ ಎಂದರು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕರಾವಳಿ ತೀರದ ಜನರು ಪ್ರಾಮಾಣಿಕ ವೃತ್ತಿಯಿಂದಲೇ ದೇಶದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಆದರೆ, ಗಳಿಸಿದ ಶೇ. 90ರಷ್ಟು ಹಣ ಊರಿಗೆ ಒಯ್ಯುತ್ತೀರಿ. ನಂಬಿಕೆ, ವ್ಯವಹಾರ ಎರಡೂ ಕಡೆಗೂ ಇದೆ. ಯಾರಿಗೂ ಮೋಸ ಮಾಡುವ ಜನ ಇವರಲ್ಲ. ಯಾರ ಜತೆಗೆ ಜತೆಯೂ ಜಗಳವಾಡದೇ, ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಇವರ ಈ ಸಂಸ್ಕಾರ ಎಲ್ಲರಿಗೂ ಮಾದರಿ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉತ್ತರ ಕರ್ನಾಟಕದ ತಿಂಡಿ, ತಿನಿಸುಗಳನ್ನಷ್ಟೇ ನೋಡುತ್ತಿದ್ದೆವು. ಈಗ ಮೂರು ದಿನ ಕರಾವಳಿ ಸವಿಯನ್ನು ಸವಿಯುವ ಅವಕಾಶ ನಮಗೆ ಸಿಕ್ಕಿದೆ. ಕರಾವಳಿ ಭಾಗದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಸಹ ಇಲ್ಲಿ ನಡೆಯಲಿವೆ. ಅಲ್ಲಿಯ ಸಂಸ್ಕೃತಿಯನ್ನು ಹುಬ್ಬಳ್ಳಿಗೆ ತಂದು ಪರಿಚಯಿಸಲು ಮುಂದಾಗಿದ್ದು ಸಂತಸದ ಸಂಗತಿ ಎಂದರು.ರೋಟರಿ ಕ್ಲಬ್ ಮಿಡ್‌ಟೌನ್ ಹುಬ್ಬಳ್ಳಿ ಅಧ್ಯಕ್ಷ ದಿನೇಶ ಶೆಟ್ಟಿ ಮಾತನಾಡಿದರು. ಅನಂತಪದ್ಮನಾಭ ಐತಾಳ, ಪವನ ಬನ್ಸಾರಿ, ಹಣಸಿ ಅಣ್ಣಪ್ಪ, ವಿ.ಎಂ. ಭಚ್, ವಿವೇಕ ಪೂಜಾರಿ ಸೇರಿದಂತೆ ಹಲವರಿದ್ದರು.
ಅಕ್ರಮ ನುಸುಳುಕೋರರ ಬಗ್ಗೆ ಎಚ್ಚರ: ಕಲೆ, ಸಂಸ್ಕೃತಿಗೆ ಹೆಸರಾದ ಕರಾವಳಿಯಲ್ಲಿ ದೇಶದ್ರೋಹಿ ಚಟುವಟಿಕೆಗೆ ಸಮುದ್ರ ಮಾರ್ಗ ಬಳಕೆ ಆಗುತ್ತಿದೆ. ಅಕ್ರಮವಾಗಿ ಬರುವವರು ಇಲ್ಲಿ ಯಾರನ್ನೋ ಮದುವೆಯಾಗಿ ಇಲ್ಲಿಯೇ ಬದುಕುತ್ತಿದ್ದಾರೆ. ಇಲ್ಲಿಯ ಅನ್ನ ತಿಂದು ದ್ರೋಹ ಮಾಡುವ ವರ್ಗವೂ ಇದೆ. ಆದ್ದರಿಂದ ಇಂಥವರ ಬಗ್ಗೆ ಜಾಗ್ರತರಾಗಿರಬೇಕು. ಅಕ್ರಮ ವಾಸಿಗಳ ಬಗ್ಗೆ ಸರ್ಕಾರಕ್ಕೆ ತಿಳಿಸಿದರೆ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.