15 ಸಾವಿರ ದಾಟಿದ ಕೊಬ್ಬರಿ ಬೆಲೆ

| Published : Sep 13 2024, 01:34 AM IST

ಸಾರಾಂಶ

15 ಸಾವಿರ ದಾಟಿದ ಕೊಬ್ಬರಿ ಬೆಲೆ

ಕನ್ನಡಪ್ರಭವಾರ್ತೆ ತಿಪಟೂರು

ಒಣ ಹಾಗೂ ಸಿಹಿ ಕೊಬ್ಬರಿಗೆ ಏಷ್ಯಾದಲ್ಲಿಯೇ ಖ್ಯಾತಿ ಹೊಂದಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸಿದ್ಧ ತಿಪಟೂರು ಕೊಬ್ಬರಿ ಬೆಲೆ ಕಳೆದ ೨ವರ್ಷಗಳಿಂದ ರೂ ೮ಸಾವಿರಕ್ಕೆ ಕುಸಿದು ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು ಒಮದು ಕಡೆಯಾದರೆ, ತಿಂಗಳಿಂದೀಚೆಗೆ ನಿಧಾನವಾಗಿ ಬೆಲೆ ಚೇತರಿಕೆ ಕಂಡು ಬುಧವಾರದ ಹರಾಜು ಕ್ವಿಂಟಲ್ ಕೊಬ್ಬರಿಗೆ ೧೫೦೨೨ ರು.ಗೆ ಮಾರಾಟವಾಗುವ ಮೂಲಕ ಕೊಬ್ಬರಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ೨೦೨೧-೨೨ರಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಗರಿಷ್ಠ ೧೮೦೦೦ ರು. ಬೆಲೆ ದಾಖಲಿಸಿತ್ತಾದರೂ ನಂತರ ನಿಧಾನವಾಗಿ ಇಳಿಕೆ ಕಂಡು ಕೇವಲ ೮ ಸಾವಿರದಂಚಿಗೆ ಕುಸಿದು ತೆಂಗು ಬೆಳೆಗಾರರು ಕಂಗಾಲಾಗುವಂತೆ ಮಾಡಿತ್ತು. ೨೦೨೪ ರ ಜುಲೈವರೆಗೂ ೮ಸಾವಿರದ ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿದ್ದ ಕೊಬ್ಬರಿ ಬೆಲೆ ಇದೇ ಆಗಸ್ಟ್ ಮೊದಲ ವಾರದಿಂದ ೯ ಸಾವಿರದ ಆಸುಪಾಸಿಗೆ ಬಂದು ನಿಧಾನವಾಗಿ ಏರುತ್ತ ೧೫೦೨೨ ರು. ಬೆಲೆ ದಾಖಲಿಸಿ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.ಕೊಬ್ಬರಿ ಬೆಲೆ ತೀವ್ರ ಕುಸಿತದಿಂದ ಕಂಗಾಲಾಗಿದ್ದ ರೈತರು ಇಂದಿನ ಬುಧವಾರದ ಟೆಂಡರ್ ಬೆಲೆ ೧೫ ಸಾವಿರ ರು. ದಾಟಿದ್ದು, ಯಾವುದಾದರೂ ವರ್ತಕರು ರೈತರಿಂದ ಇಂದಿನ ಟೆಂಡರ್ ಬೆಲೆಗೆ ಖರೀದಿಸದೆ ಹರಾಜು ಬೆಲೆಗಿಂತ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಪ್ರಯತ್ನಿಸಿರುವ ಬಗ್ಗೆ ರೈತರಿಂದ ದೂರು ಬಂದಲ್ಲಿ, ಅಂತಹ ಅಂಗಡಿಯ ಟ್ರೇಡ್ ಲೈಸೆನ್ಸನ್ನು ಯಾವುದೇ ಮುಲಾಜಿಲ್ಲದೆ ರದ್ದು ಮಾಡಲಾಗುವುದು ಹಾಗೂ ಈ ಬಗ್ಗೆ ಮಾರುಕಟ್ಟೆಯಲ್ಲಿ ಮೈಕ್ ಮೂಲಕ ಪ್ರಚುರಪಡಿಸಿ ಕಟ್ಟೆಚ್ಚೆರ ವಹಿಸಲಾಗಿದೆ ಎಂದು ತಿಪಟೂರು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮನಗೌಡರ್‌ ತಿಳಿಸಿದರು.