₹50 ದಾಟಿದ ತೆಂಗಿನಕಾಯಿ ಬೆಲೆ!

| Published : Apr 18 2025, 12:34 AM IST

ಸಾರಾಂಶ

ಕೆಲ ತಿಂಗಳ ಹಿಂದೆ ₹20 ರಿಂದ ₹30 ಬೆಲೆ ಇದ್ದ ತೆಂಗಿನಕಾಯಿ ಬೆಲೆ ಇದೀಗ ₹50 ರಿಂದ ₹60ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ದರ ದುಪ್ಪಟ್ಟಾಗಿದ್ದು, ಗ್ರಾಹಕರನ್ನು ಕಂಗೆಡಿಸಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಕೆಲ ತಿಂಗಳ ಹಿಂದೆ ₹20 ರಿಂದ ₹30 ಬೆಲೆ ಇದ್ದ ತೆಂಗಿನಕಾಯಿ ಬೆಲೆ ಇದೀಗ ₹50 ರಿಂದ ₹60ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ದರ ದುಪ್ಪಟ್ಟಾಗಿದ್ದು, ಗ್ರಾಹಕರನ್ನು ಕಂಗೆಡಿಸಿದೆ.

ಗದಗ ಜಿಲ್ಲೆ ಸೇರಿದಂತೆ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲೂ ತೆಂಗಿನಕಾಯಿ ದರದಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ ವಾರ ನಡೆಯುವ ಸಂತೆಯಲ್ಲಿ ಈ ಹಿಂದೆ ಸಾಮಾನ್ಯವಾಗಿ ಒಂದು ತೆಂಗಿನಕಾಯಿಗೆ ಕನಿಷ್ಠ ₹10ರಿಂದ ಗರಿಷ್ಠ ₹20 ಅಥವಾ ₹25ರ ವರೆಗೆ ದರ ಇರುತ್ತಿತ್ತು. ಆದರೆ, ಈಗ ಉತ್ತಮ ಗಾತ್ರದ ತೆಂಗಿನಕಾಯಿ ಬೆಲೆ ₹40 ಆಗಿದೆ.

ಮುಂಡರಗಿ ತಾಲೂಕಿನಲ್ಲಿ ಅತಿ ಹೆಚ್ಚು ತೆಂಗಿನಕಾಯಿ ಬೆಳೆಯುವ ಗ್ರಾಮಗಳೆಂದರೆ ಮುಂಡರಗಿ, ಪೇಠಾ ಆಲೂರ, ಬರದೂರ, ಡಂಬಳ, ಸಿಂಗಟಾಲೂರ, ಡೋಣಿ, ಡೋಣಿ ತಾಂಡ, ಅತ್ತಿಕಟ್ಟಿ ತಾಂಡಗಳಾಗಿದ್ದು, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಮರಗಳಿದ್ದು, ಬೆಲೆ ಏರಿಕೆ ಬೆಳೆಗಾರರಿಗೆ ಹರ್ಷವನ್ನುಂಟು ಮಾಡಿದೆ.

ಎಲ್ಲದಕ್ಕೂ ಕಾಯಿ ಕಡ್ಡಾಯ: ಸಾಮಾನ್ಯವಾಗಿ ಅಡುಗೆಗೆ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇನ್ನು ಶುಭ ಸಮಾರಂಭ, ಅಶುಭ ಸಮಾರಂಭದಲ್ಲಿ ತೆಂಗಿನಕಾಯಿಗೂ ಅವಿನಾಭಾವ ಸಂಬಂಧ ಇದೆ. ಈ ಸಮಾರಂಭಗಳಲ್ಲಿ ಮಾಡುವ ಅಡುಗೆಗಳಿಗೆ ತೆಂಗಿನಕಾಯಿಯನ್ನು ಬಳಸಿಯೇ ಬಳಸುತ್ತಾರೆ. ದರ ಏರಿಕೆಯು ಅಡುಗೆ ಖರ್ಚು ಹೆಚ್ಚಾಗುವಂತೆ ಮಾಡಿದೆ.

ಆಂಧ್ರಪ್ರದೇಶ ಸೇರಿ ಬೇರೆ ಬೇರೆ ರಾಜ್ಯಗಳಿಂದ ಮತ್ತು ರಾಜ್ಯದ ಗಡಿಭಾಗಗಳಿಂದ ಆವಕವಾಗುತ್ತಿದ್ದ ತೆಂಗಿನಕಾಯಿ ದಿನೆ ದಿನೇ ಕಡಿಮೆ ಆಗುತ್ತಿರುವ ಕಾರಣ ಮತ್ತು ಅಲ್ಲಿಯೂ ಕೂಡಾ ತೆಂಗಿನ ಕಾಯಿ ಬೆಲೆ ಹೆಚ್ಚಳದಿಂದಾಗಿ ದರದಲ್ಲಿ ಏರಿಕೆಗೆ ಕಾರಣವಾಗಿದೆ.

ಬೇಡಿಕೆ ಹೆಚ್ಚಿದ ಎಳನೀರು:ದರ ಹೆಚ್ಚಾಗಲು ಎಳನೀರು ಮಾರಾಟ ಕಾರಣ ಎನ್ನಲಾಗಿದೆ. ಈಗ ಬೇಸಿಗೆ ಕಾಲವಾದ ಕಾರಣ ದಾಹವನ್ನು ತಣಿಸಲು ಹೆಚ್ಚಿನ ಜನರು ಎಳೆನೀರಿನ ಮೊರೆ ಹೋಗುತ್ತಿದ್ದಾರೆ. ಇದೇ ಪರಿಸ್ಥಿತಿ ರಾಜ್ಯದ ಉದ್ದಗಲಕ್ಕೂ ಇದೆ. ಎಳನೀರು ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದ್ದು, ವ್ಯಾಪಾರಿಗಳು ರೈತರಿಂದ ತೋಟದಲ್ಲಿ ₹30 ರಿಂದ ₹35 ಗಳಿಗೆ ಕೊಳ್ಳುತ್ತಿದ್ದಾರೆ.

ಎಳನೀರಿಗೆ ಬೇಡಿಕೆಯಿಂದ ರೈತರು ತೆಂಗಿನಕಾಯಿ ಆಗುವುದಕ್ಕೂ ಮುನ್ನ ಎಳನೀರನ್ನೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ತೆಂಗಿನಕಾಯಿಯ ಆವಕ ಕಡಿಮೆಯಾಗಿದ್ದು, ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.

ಮಳೆ ಸುರಿದು ವಾತಾವರಣ ತಂಪಾಗಿ ಎಳನೀರು ಬೇಡಿಕೆ ಕಡಿಮೆಯಾಗುವವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ.