ಗೋಕರ್ಣದಲ್ಲಿ ತೆಂಗಿನಕಾಯಿ ದರ ಬಲು ದುಬಾರಿ

| Published : Mar 07 2025, 11:48 PM IST

ಸಾರಾಂಶ

ಕಳೆದ ಎರಡು ವಾರದಲ್ಲಿ ದರ ₹೪೦ ರಿಂದ ₹೫೦ ರುಪಾಯಿವರೆಗೆ ಏರಿದೆ.

ಗೋಕರ್ಣ: ಪ್ರವಾಸಿ ತಾಣದಲ್ಲಿ ಹೊಟೇಲ್‌ಗಳಲ್ಲಿ ಹೆಚ್ಚು ತೆಂಗಿನಕಾಯಿ ಬಳಕೆಯಾಗುವುದರ ಜೊತೆಗೆ ಪ್ರಮುಖ ದೇವಾಲಯಗಳಿಗೆ ತೆರಳುವ ಭಕ್ತರು ಹಣ್ಣು -ಕಾಯಿ ಅರ್ಪಿಸುವ ಪದ್ಧತಿ ಇದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದೇ ದರ ಗಗನಕ್ಕೇರಿದೆ.

ಕಳೆದ ಎರಡು ವಾರದಲ್ಲಿ ದರ ₹೪೦ ರಿಂದ ₹೫೦ ರುಪಾಯಿವರೆಗೆ ಏರಿದೆ. ಮುಂಜಾನೆ ಚಟ್ನಿ, ಮಧ್ಯಾಹ್ನ, ಸಂಜೆ ಸಂಬಾರ ಮತ್ತಿತರ ತಿಂಡಿ ತಯಾರಿಕೆಗೆ ಕನಿಷ್ಠ ಒಂದು ಹೊಟೇಲ್‌ಗೆ ೧೫ ತೆಂಗಿನಕಾಯಿ ಬೇಕಾಗುತ್ತದೆ. ಗೋಕರ್ಣ ಹೋಬಳಿ ವ್ಯಾಪ್ತಿಯಲ್ಲಿ ಆರು ನೂರಕ್ಕೂ ಹೆಚ್ಚು ಹೊಟೇಲ್‌ಗಳಿವೆ.

ಜೊತೆಗೆ ಮನೆ ಬಳಕೆಗೆ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಬಂದವರಿಗೆ ಹಾಗೂ ಇವರ ಊಟದ ಸಲುವಾಗಿ ತೆಂಗಿನಕಾಯಿಗಳು ಅವಶ್ಯಕತೆ ಇದೆ.

ಈ ಭಾಗದಲ್ಲಿ ತೆಂಗಿನ ಬೆಳೆಯೇ ಅಧಿಕವಾಗಿದ್ದ ಕಾರಣ ಸುತ್ತಲಿನ ಹಳ್ಳಿಗಳಿಂದ ತೆಂಗಿನಕಾಯಿ ಪೂರೈಕೆಯಾಗುತ್ತದೆ. ಹಲವು ತಿಂಗಳಿಂದ ತೆಂಗಿನ ಮರಕ್ಕೆ ರೋಗಬಾಧೆಯಿಂದ ಇಳುವರಿ ಕಡೆಯಾಗಿದೆ ಎನ್ನಲಾಗಿದೆ. ಇದೇ ಸ್ಥಿತಿ ಮುಂದುವರಿದರೆ ಹೊಟೇಲ್ ತಿಂಡಿ ದುಬಾರಿಯಾಗುವುದಲ್ಲದೆ, ಕಾಯಿ ಬಳಸುವ ತಿಂಡಿ, ತಿನಿಸುಗಳ ತಯಾರಿಕೆ ಕಡಿತಗೊಳ್ಳುವ ಲಕ್ಷಣವಿದ್ದು, ಎಲ್ಲೆಡೆಯಿಂದ ಗ್ರಾಹಕರಿಗೆ ಹೊರೆಯಾಗಲಿದೆ.

ಎಳನೀರು ಶತಕದತ್ತ:

ಇನ್ನು ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎಳನೀರು ದರ ಈಗಾಗಲೇ ₹೬೦ರಿಂದ ₹೮೦ ದರದಲ್ಲಿ ಮಾರಾಟವಾಗುತ್ತಿದೆ. ಕಳೆದ ಎರಡು ದಿನಗಳಿಂದ ಪೂರೈಕೆ ಇಲ್ಲದೆ ಕೊರತೆ ಉಂಟಾಗಿದೆ. ಶಿವಮೊಗ್ಗ, ದಾವಣಗೆರೆ ಮತ್ತಿತರ ಹೊರ ಜಿಲ್ಲೆಯಿಂದ ಈ ಮೊದಲು ವಾರದಲ್ಲಿ ಎರಡು ಬಾರಿ ಸಿಯಾಳ ತರುವವರು ಎರಡು ವಾರವಾದರೂ ಪೂರೈಕೆಯಾಗಿಲ್ಲ.

ಕ್ಷೀಣಿಸಿದ ಶಿವರಾತ್ರಿ ಕೊಯ್ಲು:

ಸಾಮಾನ್ಯವಾಗಿ ಶಿವರಾತ್ರಿಯ ವೇಳೆ ತೆಂಗಿನ ಕೊಯ್ಲಿಗೆ ಅಧಿಕ ಇಳುವರಿ ಬರುವುದು ಸರ್ವೇ ಸಾಮಾನ್ಯ. ಇಳುವರಿ ಹೆಚ್ಚು. ಆದರೆ ದರ ಕುಸಿಯುವ ಸಂಭವ ಇರುತ್ತಿತ್ತು. ಆದರೆ ಈ ಬಾರಿ ಕಡಿಮೆ ಇಳುವರಿಯಿಂದಾಗಿ ದರ ಇಳಿಕೆಯಾಗುವ ಯಾವ ಲಕ್ಷಣ ಇಲ್ಲ. ಇದಲ್ಲದೆ, ಮದುವೆ- ಮುಂಜಿ ವರ್ಧಂತಿ ಮೊದಲಾದ ಕಾರ್ಯಕ್ರಮಗಳಿಗೆ ತೆಂಗಿನಕಾಯಿಯ ಅಪಾರ ಬೇಡಿಕೆ ಇದೆ. ಗ್ರಾಹಕ ಕಂಗಾಲಾಗಿದ್ದಾನೆ. ಕರಾವಳಿಯಲ್ಲಿ ತೆಂಗಿನಕಾಯಿಯ ಪದಾರ್ಥ ಯಥೇಚ್ಛವಾಗಿ ಬಳಸಲಾಗುತ್ತದೆ. ಒಟ್ಟಾರೆ ಮನೆಯ ದೋಸೆಗೆ ಚಟ್ನಿ ಅರೆಯುವ ಮನೆಯೊಡತಿಗೆ ಇದರ ಬಿಸಿ ತಗುಲಿದ್ದಂತೂ ಸತ್ಯ.