ತೆಂಗಿನ ಸಸಿ ಕಿತ್ತ ಪ್ರಕರಣ: ಮುಂದುವೆರೆದ ಪ್ರತಿಭಟನೆ

| Published : Aug 03 2024, 12:42 AM IST

ತೆಂಗಿನ ಸಸಿ ಕಿತ್ತ ಪ್ರಕರಣ: ಮುಂದುವೆರೆದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕೋಳಘಟ್ಟ ಗ್ರಾಮದ ಸರ್ವೇ ನಂಬರ್ ೫೫ ರಲ್ಲಿ ನೆಡಲಾಗಿದ್ದ ತೆಂಗಿನ ಸಸಿಗಳನ್ನು ತಾಲೂಕು ಆಡಳಿತ ಕಿತ್ತು ಹಾಕಿರುವ ಪ್ರಕರಣ

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಕೋಳಘಟ್ಟ ಗ್ರಾಮದ ಸರ್ವೇ ನಂಬರ್ ೫೫ ರಲ್ಲಿ ನೆಡಲಾಗಿದ್ದ ತೆಂಗಿನ ಸಸಿಗಳನ್ನು ತಾಲೂಕು ಆಡಳಿತ ಕಿತ್ತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಹ ಪ್ರತಿಭಟನೆ ತಾಲೂಕು ಕಚೇರಿ ಮುಂದೆ ಮುಂದುವರೆದಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿಗಳಾದ ಸಪ್ತಶ್ರೀ ಪ್ರತಿಭಟನೆ ನಡೆಸುತ್ತಿರುವ ಮಹದೇವಯ್ಯ, ರೈತ ಸಂಘದ ಅಧ್ಯಕ್ಷ ತಾಳಕೆರೆ ನಾಗೇಂದ್ರ, ಮುಖಂಡರಾದ ಕಡೇಹಳ್ಳಿ ಸಿದ್ದೇಗೌಡ, ತಾವರೇಕೆರೆಯ ಟಿ.ಎಸ್.ಬೋರೇಗೌಡ, ಪ್ರಕಾಶ್ ಸೇರಿದಂತೆ ಹಲವು ಮುಖಂಡರೊಂದಿಗೆ ಮಾತನಾಡಿದರು. ಈ ಸಂಬಂಧ ಉತ್ತರಿಸಿದ ಉಪವಿಭಾಗಾಧಿಕಾರಿ ಸಪ್ತಶ್ರೀ ಮಹದೇವಯ್ಯನವರ ಕುಟುಂಬ ೨೦೧೮ ರಲ್ಲೇ ನಮಗೆ ಜಮೀನು ಮಂಜೂರಾಗಿದೆ ಎಂದು ಹೇಳಿದ್ದಾರೆ. ಆದರೆ ಇತ್ತೀಚೆಗೆ ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ. ಆದರೆ ಕುಟುಂಬದ ಸದಸ್ಯರು ಬಹಳ ತಿಂಗಳ ಹಿಂದೆಯೇ ತೆಂಗಿನ ಸಸಿಗಳನ್ನು ನೆಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಸುಳ್ಳು. ತಾವು ಇತ್ತೀಚೆಗೆ ಸ್ಥಳ ಪರಿಶೀಲನೆಗೆ ಹೋಗಿದ್ದ ಸಂಧರ್ಭದಲ್ಲೂ ಸಹ ಅಲ್ಲಿ ತೆಂಗಿನ ಸಸಿಗಳನ್ನು ನೆಟ್ಟಿರಲಿಲ್ಲ. ಆದರೆ ಈಗ ಸಸಿ ನೆಟ್ಟಿರುವುದು ಬೆಳಕಿಗೆ ಬಂದಿದೆ. ಮಹದೇವಯ್ಯನವರು ಸಸಿ ನೆಟ್ಟಿರುವ ಸ್ಥಳ ಸರ್ಕಾರಿ ಗೋಮಾಳವಾಗಿದೆ. ಅದು ಸರ್ಕಾರದ ಆಸ್ತಿ. ಅಲ್ಲಿ ಅಕ್ರಮ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ತಿಳಿಸಿದರು.

ಮತ್ತೊಮ್ಮೆ ಸರ್ವೆಗೆ ಆದೇಶ:

ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವೆ ವಾದವಿವಾದಗಳು ಮಿತಿ ಮೀರಿದ ಸಂಧರ್ಭದಲ್ಲಿ ಉಪ ವಿಭಾಗಾಧಿಕಾರಿ ಸಪ್ತಶ್ರೀ ಯವರು ನಾಳೆಯೇ ಸ್ಯಾಟಲೈಟ್ ಸಹಾಯದಿಂದ ಮಹದೇವಯ್ಯ ಕುಟುಂಬ ಎಂದು ಸಸಿಗಳನ್ನು ನೆಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿ ತಿಳಿಸಿದರು. ಅಲ್ಲದೇ ಸರ್ವೇ ನಂಬರ್ ೫೫ ರಲ್ಲಿ ಅನುಭವವಿರುವ ಜಮೀನನ್ನು ಅಳೆಯಲು ತಾಲೂಕು ಭೂ ಮಾಪನಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕ್ರಷರ್ ಗೆ ಸಂಬಂಧಿಸಿದಂತೆ ಜಟಾಪಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಪುನರ್ ಅಳತೆ ಕಾರ್ಯ ಕೈಗೊಂಡು ಪ್ರಕರಣವನ್ನು ಸುಖಾಂತ್ಯಗೊಳಿಸುವುದಾಗಿ ಸಪ್ತಶ್ರೀ ಯವರು ಪ್ರತಿಭಟನಾಕಾರರಿಗೆ ತಿಳಿಸಿದರು. ಮುಂದುವರೆದ ಪ್ರತಿಭಟನೆ: ಉಪ ವಿಭಾಗಾಧಿಕಾರಿಗಳಾದ ಸಪ್ತಶ್ರೀ ಯವರು ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಹಲವಾರು ಬೇಡಿಕೆಗಳನ್ನು ಇಟ್ಟು ಪುನಃ ಅಹೋ ರಾತ್ರಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಹದೇವಯ್ಯನವರ ಕುಟುಂಬದ ಸದಸ್ಯರೊಂದಿಗೆ ಗ್ರಾಮದ ಮುಖಂಡರು ಮತ್ತು ರೈತ ಸಂಘದ ಪದಾದಿಕಾರಿಗಳು ಸಾಥ್ ನೀಡಿದ್ದಾರೆ. ತಮ್ಮ ಜಮೀನನ್ನು ಗುರುತಿಸಿಕೊಡಬೇಕು ಹಾಗೂ ತಮಗೆ ಆಗಿರುವ ನಷ್ಠವನ್ನು ಕೂಡಲೇ ಭರಿಸಬೇಕೆಂದು ಆಗ್ರಹಿಸಿ ಧರಣಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.