ನರಗುಂದದಲ್ಲಿ ಎಳನೀರು ಅಭಾವ, ₹60ಕ್ಕೆ ಏರಿದ ಬೆಲೆ

| Published : May 09 2025, 12:32 AM IST

ನರಗುಂದದಲ್ಲಿ ಎಳನೀರು ಅಭಾವ, ₹60ಕ್ಕೆ ಏರಿದ ಬೆಲೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಬೇಸಿಗೆಯ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಬಿಸಲಿನ ಝಳಕ್ಕೆ ಜನರು ತಂಪು ಪಾನೀಯಗಳು ಸೇರಿದಂತೆ ಎಳನೀರಿನ ಮೊರೆ ಹೋಗಿದ್ದಾರೆ.

ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದ ಪ್ರಸಕ್ತ ಬೇಸಿಗೆಯ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಬಿಸಲಿನ ಝಳಕ್ಕೆ ಜನರು ತಂಪು ಪಾನೀಯಗಳು ಸೇರಿದಂತೆ ಎಳನೀರಿನ ಮೊರೆ ಹೋಗಿದ್ದಾರೆ.

ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಎಳನೀರಿಗೆ ತೀವ್ರ ಅಭಾವ ಉಂಟಾಗಿದ್ದು, ಇಲ್ಲಿವರೆಗೆ ₹35ರಿಂದ ₹40 ಗಳಿಗೆ ಮಾರಾಟವಾಗುತ್ತಿದ್ದ ಎಳನೀರಿನ ಬೆಲೆ ಈಗ ₹60ಕ್ಕೆ ಏರಿಕೆಯಾಗಿದ್ದು, ಜನ ಹೌಹಾರಿದ್ದಾರೆ.

ಎಳನೀರು ವರ್ಷಪೂರ್ತಿ ಬಹುತೇಕ ಜನರ ನೆಚ್ಚಿನ ಪಾನೀಯವಾಗಿದೆ. ಇನ್ನು ಕೆಲವರು ಬೇಸಿಗೆಯಲ್ಲಿ ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳಲು ಆಯ್ಕೆ ಮಾಡಿಕೊಳ್ಳುವರು, ಜನರು ಈಗ ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಎಳನೀರು ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕವರಿಂದ ವೃದ್ಧರವರೆಗೆ ಎಲ್ಲರಿಗೂ ಇಷ್ಟಪಡುವ ತಂಪು ಪಾನೀಯವೆಂದರೆ ಎಳನೀರು. ರೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವೈದ್ಯರ ಸಲಹೆ ಮೇರೆಗೆ ಎಳನೀರನ್ನು ನೀಡಲಾಗುತ್ತಿದೆ. ಇದು ಪೊಟ್ಯಾಸಿಯಮ್, ಮೆಗ್ನಿಸಿಯಮ್ ಹಾಗೂ ಕ್ಯಾಲ್ಸಿಯಂ ಹೊಂದಿದ್ದು, ರಕ್ತದೊತ್ತಡ ನಿಯಂತ್ರಣ, ಸ್ನಾಯು ಸೆಳೆತ ತಗ್ಗಿಸುವಲ್ಲಿ ಸಹಕಾರಿಯಾಗುತ್ತದೆ, ಫೈಬರ್ ಅಂಶವಿರುವುದರಿಂದ ಜೀರ್ಣಕ್ರಿಯೆ ಸುಧಾರಣೆಗೆ, ಮಲಬದ್ಧತೆ ನಿವಾರಣೆಗೆ ಅನುಕೂಲ. ಕಡಿಮೆ ಕ್ಯಾಲೋರಿಯುಳ್ಳ ಎಳನೀರು ತೂಕ ಕಡಿಮೆ ಮಾಡಲು ಸಹಾಯಕವೆಂದು ವೈದ್ಯರು ಹೇಳುವರು.

ಪೂರೈಕೆ ಕಡಿಮೆ: ಈ ವರ್ಷದಲ್ಲಿ ಎಳನೀರಿನ ಇಳುವರಿ ಕಡಿಮೆಯಾಗಿದ್ದು, ಈ ಭಾಗದ ಕೊಣ್ಣೂರ, ಸುರೇಬಾನ, ಹಂಪಿವಳಿ, ಬೂದಿಹಾಳ, ಮುನವಳ್ಳಿ ಪ್ರದೇಶಗಳಿಂದ ನರಗುಂದಕ್ಕೆ ಎಳನೀರು ಪೂರೈಕೆಯಾಗುತ್ತದೆ. ಈ ಬಾರಿ ಪೂರೈಕೆ ಪ್ರಮಾಣ ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಇದರ ಬೆಲೆ ಹೆಚ್ಚಾಗಿದೆ ಎಂದು ಎಳನೀರು ಮಾರಾಟ ಮಾಡುವ ವ್ಯಾಪಾರಿ ಚಂದ್ರಶೇಖರ ಸುರಕೋಡ ಹೇಳುವರು.

ಹಿಂದಿನ ವರ್ಷಗಳಲ್ಲಿ ರಸ್ತೆ ಬದಿ, ಜನಸಂದಣಿ ಪ್ರದೇಶಗಳಲ್ಲಿ ಎಳನೀರು ವ್ಯಾಪಾರ ಸಹಜವಾಗಿತ್ತು. ಜನರು ದಾಹ ತಗ್ಗಿಸಿಕೊಳ್ಳಲು ಎಳನೀರು ಆಯ್ಕೆ ಮಾಡುತ್ತಿದ್ದರು. ಆದರೆ ಇದೀಗ ಎಳನೀರು ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದರಿಂದ ಸೇವನೆಗೆ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಮೇಲಾಗಿ ಮಧ್ಯವರ್ತಿಗಳು ನೇರವಾಗಿ ರೈತರ ತೋಟಗಳಿಗೆ ತೆರಳಿ ಎಳನೀರು ಸಂಗ್ರಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸ್ಥಳೀಯ ಪೂರೈಕೆ ಕಡಿಮೆಯಾಗುತ್ತದೆ.

ಎಳನೀರು ವ್ಯಾಪಾರಿಗಳು ನೇರವಾಗಿ ರೈತರ ಹತ್ತಿರ ಖರೀದಿ ಮಾಡಿ ಮಾರಾಟ ಮಾಡಿದರೆ ಗ್ರಾಹಕರಿಗೆ ಸ್ವಲ್ಪ ಕಡಿಮೆ ಬೆಲೆಗೆ ಮಾರಾಟ ಮಾಡಬಹುದು, ಆದರೆ ಇಂದು ಲಾಭಕ್ಕಾಗಿ ಮಧ್ಯವರ್ತಿಗಳು ನೇರವಾಗಿ ರೈತರ ತೋಟಗಳಿಗೆ ಹೋಗಿ ಎಳನೀರು ಖರೀದಿ ಮಾಡಿ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ತಾವು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಎಳನೀರು ವ್ಯಾಪಾರಿಗಳು ಹೇಳುವರು.